ಅರಕಲಗೂಡು: ತಾಲೂಕಿನ ಕೆಲವು ಕಡೆ ನಕಲಿ ರಸಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸಿರುವ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಶಾಸಕ ಎ.ಟಿ. ರಾಮಸ್ವಾಮಿ ಆಗ್ರಹಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ ವ್ಯಾಪ್ತಿಯಲ್ಲಿ ಕಡಿಮೆ ಬೆಲೆಗೆ ರಸ ಗೊಬ್ಬರ ನೀಡುವುದಾಗಿ ಹೇಳಿ ಅಡಿಗೆ ಉಪ್ಪು ಮತ್ತು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿದ ನಕಲಿ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿ 5 ಮಂದಿ ವಂಚಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ನಕಲಿ ರಸಗೊಬ್ಬರ ವಂಚಕರ ಜಾಲ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬೇರು ಬಿಟ್ಟಿರುವ ಶಂಕೆ ಇದೆ. ಬಂಧಿತರೆಲ್ಲರು ಇದೇ ಜಿಲ್ಲೆಯವರಾಗಿದ್ದು ಅಕ್ಕಪಕ್ಕದ ಜಿಲ್ಲೆಗಳ ಅಮಾಯಕ ರೈತರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ಮೋಸ ತಿಳಿಯದ ರೈತರು ಕಡಿಮೆ ದರಕ್ಕೆ ರಸಗೊಬ್ಬರ ದೊರಕುತ್ತದೆ ಎಂಬ ಆಸೆಯಿಂದ ಮನೆ,ಮಠಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಂಚಕರನ್ನು ಬಂಧಿಸಿದರಷ್ಟೆ ಸಾಲದು. ಕಠಿಣ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಇಂತಹ ದಂದೆ ಕೋರರಿಗೆ ಕಾನೂನು ಭಯ ಇಲ್ಲವಾಗಿದೆ. ಹೀಗಾಗಿ ಇದು ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿದೆ. ಕೇವಲ ರಸಗೊಬ್ಬರವಷ್ಟೆ ಅಲ್ಲದೆ, ಬಿತ್ತನೆ ಬೀಜ, ಕೀಟನಾಶಕ, ಆಹಾರ ಪದಾರ್ಥಗಳು, ಔಷಧ, ಮದ್ಯ ಮಾರಾಟ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳನ್ನುನಕಲಿ ದಂಧೆ ವ್ಯಾಪಿಸಿದೆ. ಬಲವಾದ ಕಾನೂನು ರೂಪಿಸಿ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಸಮಾಜ ದ್ರೋಹಿಗಳಲ್ಲಿ ಭಯ ಮೂಡಿಸಬಹುದಾಗಿದೆ.
ಇಲ್ಲದಿದ್ದಲ್ಲಿ ಇದೊಂದು ರೀತಿಯ ನಾಟಕಿಯ ಪ್ರಕರಣಗಳಾಗಿ ಅಮಾಯಕರು ನಿರಂತರ ಶೋಷಣೆಗೆ ಬಲಿಯಾಗಬೇಕಾಗುತ್ತದೆ. ರೈತರು ಕಡಿಮೆ ದರಕ್ಕೆ ದೊರೆಯುತ್ತದೆ ಎಂಬ ಕಾರಣದಿಂದ ಇಂತಹ ವಂಚಕರ ಜಾಲಕ್ಕೆ ಬಲಿಯಾಗಿ ಕಷ್ಟಪಟ್ಟು ಬೆಳೆದ ಬೆಳೆ ಮತ್ತು ಹಣವನ್ನು ಹಾಳು ಮಾಡಿಕೊಳ್ಳದೆ ಅಧಿಕೃತ ಮಾರಾಟಗಾರರಲ್ಲಿ ಮಾತ್ರ ಕೊಂಡುಕೊಳ್ಳಬೇಕು. ಇಂತಹ ವಂಚಕರ ಜಾಲ ಗ್ರಾಮೀಣ ಭಾಗದಲ್ಲಿ ಕಂಡುಬಂದರೆ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಒಳಪಡಿಸಲು ಮುಂದಾಗುವಂತೆ ತಿಳಿಸಿದರು.
ಸಿಪಿಐ ಸತ್ಯನಾರಾಯಣ, ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ತಾಪಂ ಇಒ ರವಿಕುಮಾರ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಿಂಗರಾಜ್ ಇದ್ದರು.
0 Comments