ಅರಕಲಗೂಡು: ಕೇಂದ್ರ ಸರ್ಕಾರ ರಫ್ತು ಶುಲ್ಕ ಕಡಿತಗೊಳಿಸಿ ಮುಕ್ತ ಮಾರುಕಟ್ಟೆ ನೀತಿ ಜಾರಿಗೊಳಿಸಿ ವಿದೇಶಿ ಕಂಪನಿಗಳು ಅಧಿಕ ಪ್ರಮಾಣದಲ್ಲಿ ಅಡಕೆ ಮತ್ತು ಹೊಗೆಸಪ್ಪನ್ನು ಖರೀದಿಸಿದರಷ್ಟೇ ಬೆಳೆಗಾರರನ್ನು ಆರ್ಥಿಕವಾಗಿ ಮೇಲೆತ್ತಲು ಸಾಧ್ಯ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಸವಾಪಟ್ಟಣದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಡಕೆ ಮತ್ತು ತಂಬಾಕು ಬೆಳೆಗಾರರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಕೆ ಮತ್ತು ತಂಬಾಕು ಮಾರುಕಟ್ಟೆ ಕೆಲವೇ ಕಂಪನಿಗಳು ಹಾಗೂ ವರ್ತಕರ ಹಿಡಿತದಲ್ಲಿರುವ ಕಾರಣ ಬೆಲೆ ತಾರತಮ್ಯವಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಕ್ಯಾಂಪ್ಕೋ ಮತ್ತು ಐಟಿಸಿ ಕಂಪನಿ ಬೆಳೆಗಾರರನ್ನು ಶೋಷಣೆ ಮಾಡುತ್ತಿವೆ. ಇಂಥ ಕಂಪನಿಗಳನ್ನು ನಿಯಂತ್ರಿಸಿ ಪೈಪೋಟಿ ಎದುರಿಸಲು ಮುಕ್ತ ಮಾರುಕಟ್ಟೆ ನೀತಿಗೆ ಒತ್ತು ನೀಡಬೇಕಾಗಿದೆ.
ಹೀಗಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ ತಂದು ಕೇಂದ್ರ ಸರ್ಕಾರ ರಫ್ತು ಶುಲ್ಕವನ್ನು ಕಡಿತಗೊಳಿಸಿ ಹೆಚ್ಚಿನದಾಗಿ ವಿದೇಶಿ ಕಂಪನಿಗಳು ಅಡಕೆ ಮತ್ತು ತಂಬಾಕು ಖರೀದಿ ವ್ಯಾಪಾರಕ್ಕೆ ಉತ್ತೇಜನ ನೀಡುವ ಅನಿವಾರ್ಯತೆ ಎದುರಾಗಿದೆ ಎಂದರು.
ಬೆಳೆಗಾರ ನಟರಾಜ್ ಚನಂಗೆರೆ ಮಾತನಾಡಿ, ರೈತ ಕಂಪನಿಗಳನ್ನು ಹೆಚ್ಚು ಹುಟ್ಟು ಹಾಕಿ ಅವುಗಳ ಖರೀದಿಸುವ ದಾಸ್ತಾನನ್ನು ಬೇಡಿಕೆ ಬರುವ ತನಕ ಸಂಗ್ರಹಿಸಿಟ್ಟುಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ರೈತ ಕಂಪನಿಗಳನ್ನು ರಕ್ಷಣೆಗಾಗಿ ಹೆಚ್ಚಿನ ಬ್ಯಾಂಕ್ ಸಾಲ ಒದಗಿಸಿ ರಕ್ಷಣೆ ಮಾಡುವುದು ತುರ್ತಾಗಿ ಆಗಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಬಿ.ವಿ. ಕುಮಾರಸ್ವಾಮಿ ಮಾತನಾಡಿ, ಅಡಕೆ ಬೆಳೆಗಾರರ ಸಹಕಾರ ಸಂಘಗಳನ್ನು ಅಸ್ತಿತ್ವಕ್ಕೆ ತರಬೇಕಿದೆ ಎಂದರು.
ರೈತ ಮುಖಂಡ ಶೀಬಳ್ಳಿ ಸೋಮಶೇಖರ್ ಮಾತನಾಡಿ, ಎಲ್ಲರೂ ಒಗ್ಗೂಡಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ಹೇಳಿದರು.
ಅಡಿಕೆ ಬೆಳೆಗಾರ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ.ವಿ. ಶಿವಮೂರ್ತಿ ಮಾತನಾಡಿ, ಜನಪ್ರತಿನಿಧಿಗಳಿಂದ ರೈತರ ಹಿತ ರಕ್ಷಣೆ ಅಸಾಧ್ಯ. ಹೀಗಾಗಿ ರೈತರು ಸಂಘಟಿತರಾಗಿ ಸಂಘಗಳನ್ನು ಸ್ಥಾಪಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ನಿವೃತ್ತ ಶಿಕ್ಷಕ ಬಿ.ಪಿ. ವೀರೇಶ್ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಉತ್ತಮ ಲಾಭ ಸಿಗುತ್ತಿಲ್ಲ, ವೆಚ್ಚವೇ ಅಧಿಕವಾಗಿ ಕೃಷಿಯಿಂದ ವಿಮುಖವಾಗುವ ಕಾಲ ಸನ್ನಿಹಿತವಾಗುತ್ತಿದೆ. ಹೀಗಾಗಿ ಕೆಲವೇ ಪ್ರಭಾವಿ ವರ್ತಕರ ಹಿಡಿತದಲ್ಲಿರುವ ಮಾರುಕಟ್ಟೆಗಳನ್ನು ನಿಯಂತ್ರಿಸಿ ಬೆಳೆಗಾರರು ಉತ್ತಮ ಬೆಲೆ ದೊರಕುವಂತಾಗಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಮಾಳೇನಹಳ್ಳಿ ಅಣ್ಣೇಗೌಡ, ಬೆಟ್ಟಸೋಗೆ ರಾಜಶೇಖರ್, ಕರ್ಕಿಕೊಪ್ಪಲು ಮಲ್ಲೇಶ್, ಮೂಲೇಹೊಸಹಳ್ಳಿ ಸುರೇಶ್, ಮಹೇಂದ್ರ ಕುಮಾರ್, ಕೆರಗೋಡು ಮಂಜು, ತಟ್ಟವಾಳು ಲೋಕೇಶ್, ಜಯಶಂಕರ್, ಶೀಬಳ್ಳಿ ಹೊನ್ನಪ್ಪ, ವಿಷಕಂಠಪ್ಪ, ಕೋಟೆ ಕರ್ಪೂರವಳ್ಳಿ ಮಲ್ಲಪ್ಪ, ಅನುಪತಿ, ನಿವೃತ್ತ ಶಿಕ್ಷಕ ಚಂದ್ರಶೇಖರ್ ಮುಂತಾದ ಬೆಳೆಗಾರರು ಸಂವಾದದಲ್ಲಿ ಪಾಲ್ಗೊಂಡಿದ್ದರು.
0 Comments