ಅರಕಲಗೂಡು: ಐಟಿಸಿ ಕಂಪನಿ ಹಿಡಿತದಲ್ಲಿರುವ ತಂಬಾಕು ಮಂಡಳಿ ರದ್ದುಪಡಿಸಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೊಳಿಸಿ ಹೊಗೆಸೊಪ್ಪು ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುವ ಮೂಲಕ ರೈತರು ಅನುಭವಿಸುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸಬೇಕು ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಆಗ್ರಹಿಸಿದರು.
ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ಹರಾಜು ಪ್ರಕ್ರಿಯೆ ಹಾಗೂ ಬೆಲೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ತಂಬಾಕು ಮಂಡಳಿ ಐಟಿಸಿ ಕಂಪನಿಯ ಕಪಿಮುಷ್ಠಿಗೆ ಸಿಲುಕಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೊಗೆಸೊಪ್ಪು ಉತ್ಪಾದಿಸಿದ ರೈತರಿಗೆ ಉತ್ತಮ ಬೆಲೆ ಸಿಗದಾಗಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಬೆಲೆ ಕುಸಿತದ ನಷ್ಟದ ವಿರುದ್ದ ತಾಲೂಕಿನ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಧ್ವನಿ ಎತ್ತದೆ ಅನ್ನದಾತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಟಿಸಿ ಕಂಪನಿ ತಯಾರಿಸುವ ಸಿಗರೇಟ್ ಅನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೈತರು ಬೆಳೆದ ಹೊಗೆಸೊಪ್ಪಿಗೆ ಮಾತ್ರ ಕನಿಷ್ಠ ಬೆಲೆ ನೀಡಿ ಶೋಷಣೆ ಮಾಡಲಾಗುತ್ತಿದೆ. ತೋರಿಕೆಗೆ ಮಾತ್ರ ಕೆಲವೇ ಬೇಲ್‌ಗಳ ಗುಣಮಟ್ಟದ ಒಂದು ಕೆಜಿ ತಂಬಾಕಿಗೆ 185 ರೂ ನೀಡಿ ಇನ್ನುಳಿದ ಸಾವಿರಾರು ಕೆಜಿ ತಂಬಾಕನ್ನು ಬೇಕಾಬಿಟ್ಟಿ ಬೆಲೆಗೆ ಕೊಳ್ಳಲಾಗುತ್ತಿದೆ. ಮಂಡಳಿ ಅಧಿಕಾರಿಗಳು ಹಾಗೂ ವರ್ತಕರು ಬೇಡಿಕೆ ನೆಪವೊಡ್ಡಿ ಅಪಾರ ಪ್ರಮಾಣದ ತಂಬಾಕನ್ನು ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರ ಗೋಳು ಕೇಳುವವರೇ ಇಲ್ಲವಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ದೂಷಿಸಿದರು.
ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಸುಳ್ಳು ಮಾಹಿತಿ ಹಬ್ಬಿಸುತ್ತಿದೆ. ಬೇರೆಲ್ಲಾ ವಸ್ತುಗಳನ್ನು ಮನೆ ಬಾಗಿಲಿನಲ್ಲೇ ಮಾರಾಟ ಮಾಡಬೇಕಾಗಿದೆ. ಆದರೆ ಕೋಟ್ಟಿಗಟ್ಟಲೆ ಆದಾಯ ತರುವ ಹೊಗೆಸೊಪ್ಪನ್ನು ಮಾತ್ರ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ಇದು ಕೇಂದ್ರ ಸರ್ಕಾರ ಅನುಸುತ್ತಿರುವ ಬೆಳೆಗಾರರಿಗೆ ಹೊರಿಸಿರುವ ದ್ವಿಮುಖ ನೀತಿಯಾಗಿದೆ.
ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೊಳಿಸಬೇಕು. ಹೊರ ದೇಶದ ಕಂಪನಿಗಳು ತಂಬಾಕು ಖರೀದಿಸುವಂತಾದರೆ ಮಾತ್ರ ರೈತರಿಗೆ ಉತ್ತಮ ಲಾಭ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಸಂಪಾದಕ ರವಿ
0 Comments