ರಾಜಯೋಗ ಶಿಕ್ಷಣದಿಂದ ಆತ್ಮಸ್ಥೈರ್ಯ ವೃದ್ಧಿ, ರೋಗ ನಿರೋಧಕ ಸೂತ್ರ

ಅರಕಲಗೂಡು ವಿಶ್ವ ಜ್ಞಾನವಾಗಿ ರೂಪುಗೊಳ್ಳುತ್ತಿರುವ ರಾಜಯೋಗ ಶಿಕ್ಷಣದಿಂದ ಮನುಷ್ಯನಲ್ಲಿ ಆತ್ಮಸ್ಥೆöÊರ್ಯ ಮೂಡಿಸಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದಲ್ಲದೇ ಆತ್ಮ- ಪರಮಾತ್ಮನಲ್ಲಿ ಸಾಕ್ಷಾತ್ಕಾರ ಹೊಂದಬಹುದು ಎಂದು ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ನುಡಿದರು.

ತಾಲೂಕಿನ ಕೊಣನೂರು ಕಾವೇರಿ ಹೊಳೆ ರಸ್ತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಸ್ಥಾಪಿಸಿರುವ ಜ್ಞಾನಜ್ಯೋತಿ ಭವನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಸೋಮವಾರ ಆಶೀರ್ವಚನ ನೀಡಿದ ಅವರು, ಇಹದಲ್ಲಿ ಸನ್ಮಾರ್ಗದ ಜೀವನ ಸಾಗಿಸಿದರೆ ಭಗವಂತನಲ್ಲಿ ಸಾಕ್ಷಾತ್ಕಾರ ಹೊಂದಬಹುದು. ಈ ನಿಟ್ಟಿನಲ್ಲಿ ಜಾತಿ, ಧರ್ಮಗಳ ಭೇದವಿಲ್ಲದೆ ಪ್ರಪಂಚದ ಜನಸಾಮನ್ಯರಿಗೆ ಆಧ್ಯಾತ್ಮದ ದರ್ಶನ ನೀಡುತ್ತಿರುವ ಏಕೈಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಹೆಗ್ಗಳಿಕೆಯಾಗಿದೆ.

ಆಧ್ಯಾತ್ಮದ ಕೇಂದ್ರವಾದ ಭಾರತ ಭೂಮಿಯಲ್ಲಿ ಉದಯಿಸಿದ ರಾಜಯೋಗ ಶಿಕ್ಷಣ ಜತ್ತಿನಲ್ಲೆಡೆ ವ್ಯಾಪಿಸುತ್ತಿದೆ ಎಂದು ಶ್ಲಾಘಿಸಿದರು.

ಜಗತ್ತಿಗೆಲ್ಲ ಇರುವ ಒಬ್ಬನೆ ದೇವರನ್ನು ವಿವಿಧ ರೂಪಗಳಲ್ಲಿ ನೋಡುತ್ತಿದ್ದೇವೆ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಿದರೆ ವಿಶ್ವ ಭ್ರಾತ್ರತ್ವ ಬೆಳೆಯಲು ಸಹಕಾರಿಯಾಗುತ್ತದೆ. ಶಿವ ಜ್ಞಾನವಾದರೆ ಜನ್ಮಾಂತರಗಳ ಪಾಪ ನಶಿಸುತ್ತದೆ ಎಂದರು.
ಬ್ರಹ್ಮಕುಮಾರಿಸ್ ಅಬು ಪರ್ವತ ಮೀಡಿಯಾ ವಿಭಾಗದ ಮುಖ್ಯಸ್ಥ ರಾಜಯೋಗಿ ಬ್ರಹ್ಮಕುಮಾರ ಕರುಣಾಜಿ ಮಾತನಾಡಿ, ದೇಶವನ್ನಾಳಿದ ಪರಕೀಯರು ಸನಾತನ ಸಂಸ್ಕೃತಿ ಮತ್ತು ಶಿಕ್ಷಣವನ್ನು ವಿನಾಶದಂಚಿಗೆ ಕೊಂಡೊಯ್ಯಲು ಯತ್ನಿಸಿದರೂ ಸಹ ಇಂದು ವಿಶ್ವದ ಎಲ್ಲೆಡೆ ಪ್ರಗತಿ ಕಾಣುತ್ತಿದೆ. 85 ವರ್ಷಗಳಿಂದ 147 ದೇಶಗಳಲ್ಲಿ ಸತ್ಸಂಗಗಳ ಮುಖೇನ ಆಧ್ಯಾತ್ಮಿಕ ಶಿಕ್ಷಣ ಹಾಗೂ ಉಚಿತವಾಗಿ ಧ್ಯಾನ, ಯೋಗ ಶಿಕ್ಷಣ ನೀಡಿ ಉನ್ನತ ಮೌಲ್ಯಗಳನ್ನು ಬಿತ್ತಲಾಗುತ್ತಿದೆ ಎಂದು ತಿಳಿಸಿದರು.

ರಾಜಯೋಗಿ ಬಿ.ಕೆ. ಲಲಿತ್ ಜಿ ಇನಾನಿ ಮಾತನಾಡಿ, ಕೆಲವು ಆತ್ಮಗಳಲ್ಲಿರುವ ರೋಗಗಳು ಸೇರಿ ಸಮಾಜ ರೋಗಗ್ರಸ್ಥವಾಗಿದೆ. ಕೋವಿಡ್ ಸೋಂಕಿಗೆ ಕಂಡುಹಿಡಿದ ಲಸಿಕೆ ಈಗ ಸೋಂಕು ನಿವಾರಿಸುತ್ತಿರುವಂತೆ, ಈಶ್ವರ ಜ್ಞಾನವೆನಿಸಿದ ಶಿವ ಶೀಲ್ಡ್ನಿಂದ ಆತ್ಮ ರೋಗ ನಿವಾರಣೆ ಸಾಧ್ಯ ಎಂಬುದನ್ನು ಅರಿಯಬೇಕು. ಹೊಸ ಭವನ ಈ ಭಾಗದ ಸ್ಥಳೀಯರಲ್ಲಿ ಭಕ್ತಿ, ಮೌಲ್ಯ ಮತ್ತು ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಂಡು ಆತ್ಮಜ್ಞಾನ ಹೊಂದಲು ಅನುಕೂಲಕರವಾಗಲಿದೆ ಎಂದು ತಿಳಿಸಿದರು.

ಮಕ್ಕಳ ತಜ್ಞ ಡಾ. ದಿನೇಶ್ ಭೈರೇಗೌಡ ಮಾತನಾಡಿ, ಮನುಷ್ಯನಿಗೆ ಎಷ್ಟೇ ಐಶ್ವರ್ಯವಿದ್ದರೂ ಆಧ್ಯಾತ್ಮಿಕ ಜ್ಞಾನದಿಂದ ಮಾತ್ರ ಮಾನಸಿಕ ಮತ್ತು ದೈಹಿಕವಾಗಿ ನೆಮ್ಮದಿ ಸಿಗುತ್ತಿದೆ, ಹೊಸ ಭವನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ರಾಜಯೋಗಿನಿ ಲಕ್ಷ್ಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ಮೋಹನ್ ಮಲ್ಲಪ್ಪ, ಉದ್ಯಮಿ ಕೃಷ್ಣೇಗೌಡ, ವಿಜಯಕುಮಾರ್, ರಂಗನಾಥ್ ಮಾತನಾಡಿದರು. ರಾಮಚಂದ್ರ, ರೇಖಾ, ಧನಲಕ್ಷ್ಮೀ ನಾಗರಾಜ್, ಸೂರ್ಯ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments