ಗಂಗೂರು ಜೀತ ವಿಮುಕ್ತರಿಗೆ ನ್ಯಾಯ ಒದಗಿಸಿ; ದಲಿತ ಸಂಘಟನೆಗಳ ಆಗ್ರಹ

ಅರಕಲಗೂಡು: ತಾಲೂಕಿನ ಗಂಗೂರು ಜೀತವಿಮುಕ್ತರಿಗೆ ಭೂಮಿ ಒದಗಿಸಿ ಅವರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಅರಕಲಗೂಡು ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಅರಕಲಗೂಡು ತಾಲ್ಲೂಕಿನ ಗಂಗೂರಿನ ದಲಿತರು ಜೀತದಿಂದ ಬಿಡುಗಡೆಗೊಂಡು 27 ವರ್ಷ ಕಳೆದರೂ ಜೀತವಿಮುಕ್ತರಿಗೆ ಜೀತಗಾರಿಕೆ ನಿಷೇಧ ಕಾಯ್ದೆ-1976ಯ ಅನುಸಾರ ಅವರಿಗೆ ಇದುವರೆಗೂ ಒಂದು ತುಂಡು ಜಮೀನನ್ನೂ ಕೊಡಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. 

ಜೀತವಿಮುಕ್ತರು ಸಾಧಾರಣ ಮಟ್ಟದ ಬದುಕು ನಡೆಸಲು ಬೇಕಾದ ಪರ್ಯಾಯ ವ್ಯವಸ್ಥೆ ಕಲ್ಪಿಸಲೂ ಸರ್ಕಾರದ ವತಿಯಿಂದ ಇದುವರೆಗೂ ಸಾಧ್ಯವಾಗಿಲ್ಲ. ಜೀತವಿಮುಕ್ತ ದಲಿತರು ಸರ್ಕಾರದ ಸೂಕ್ತ ಪರ್ಯಾಯ ವ್ಯವಸ್ಥೆಯಿಲ್ಲದೆ ಬದುಕು ಸಾಗಿಸಲು ಅನಿವಾರ್ಯವಾಗಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಂಗೂರಿನ ಜೀತವಿಮುಕ್ತ ದಲಿತರು ತುಂಡು ಭೂಮಿಗಾಗಿ ನಡೆಸುತ್ತಿರುವ ಹೋರಾಟ ಇಂದಿನದಲ್ಲ. ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಯನ್ನು ಸರ್ಕಾರ ಮತ್ತು ಜಿಲ್ಲಾಡಳಿತದ ಮುಂದಿಡುತ್ತಾ ಬಂದಿದ್ದರೂ ಜೀತವಿಮುಕ್ತರಿಗೆ ಜಮೀನು ನೀಡಲು ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಇದುವರೆಗೂ ಗಂಭೀರ ಪ್ರಯತ್ನಗಳೇ ನಡೆದಿಲ್ಲ.  ಸರ್ಕಾರ, ಶಾಸಕರು ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಜೀತವಿಮುಕ್ತ ದಲಿತರಿಗೆ ಜಮೀನು ಮಂಜೂರು ಮಾಡಲು ಇಷ್ಟು ಸಮಯವೇ ಬೇಕಿರಲಿಲ್ಲ. ಇಷ್ಟಕ್ಕೆಲ್ಲಾ ಸರ್ಕಾರ, ಶಾಸಕರು ಮತ್ತು ಅಧಿಕಾರಿಗಳ ದಲಿತ ವಿರೋಧಿ ಮನಃಸ್ಥಿತಿಯೇ ಕಾರಣವಾಗಿದೆ ಎಂದು ಆರೋಪಿಸಿದರು.

ಗಂಗೂರಿನ ಜೀತವಿಮುಕ್ತ ದಲಿತರಿಗೆ ನ್ಯಾಯಯುತವಾಗಿ ಜಮೀನು ಮಂಜೂರು ಮಾಡಿ ಕಾಯ್ದೆ ಜಾರಿ ಮಾಡದೆ ಸರ್ಕಾರವೇ ಕಾನೂನು ಉಲ್ಲಂಘನೆ ಮಾಡಿದ ಪರಿಣಾಮವಾಗಿ ದಲಿತರು ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಕಳೆದ ಮಾರ್ಚ್ 31 ರಂದು ಏಕಾಏಕಿಯಾಗಿ ಬಲವಂತವಾಗಿ ಒಕ್ಕಲೆಬ್ಬಿಸಲಾಗಿತ್ತು. ಹಾಗೂ ಮೇ 2 ರಂದು ದಲಿತರು ಸಾಗುವಳಿ ಮಾಡಿರುವ ಭೂಮಿಯಲ್ಲಿ ಅರಣ್ಯ ಇಲಾಖೆಯು ಗಿಡ ನೆಡಲು ಮುಂದಾಗಿತ್ತು.ಗಂಗೂರು ಜೀತವಿಮುಕ್ತರು , ದಲಿತ ಮತ್ತು ಜನಪರ ಹಾಗೂ ಸಂಘಟನೆಗಳ ಪ್ರತಿಭಟನೆಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಸಂಘಟನೆಗಳ ಪ್ರತಿಭಟನೆಗಳ ಕಾರಣಕ್ಕೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು.
ಸೆಪ್ಟೆಂಬರ್ 7 ರಂದು ಗಂಗೂರಿನ ಜೀತವಿಮುಕ್ತ ದಲಿತರು ಸಾಗುವಳಿ ಮಾಡುತ್ತಿದ್ದ ಭೂಮಿಯಲ್ಲಿ ಪ್ರತಿಭಟನಾ ಸಭೆಯ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಾನ್ಯ ತಹಸೀಲ್ದಾರರು ಜೀತವಿಮುಕ್ತರಿಗೆ ಜಮೀನು ನೀಡಲು ಒಂದು ವಾರದೊಳಗೆ ಭೂಮಿ ಗುರುತಿಸಲಾಗುವುದು ಹಾಗೂ ಜೀತವಿಮುಕ್ತರಿಗೆ ನೀರು, ಆಹಾರ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ 40 ದಿನ ಕಳೆದರೂ ಇದುವರೆಗೂ ಸರ್ಕಾರದ ಭರವಸೆಯ ಪ್ರಕಾರ ಏನೂ ಆಗಿರುವುದಿಲ್ಲ.

ಗಂಗೂರಿನ ಜೀತವಿಮುಕ್ತ ದಲಿತರಿಗೆ ಜಮೀನು ನೀಡುವ ಬದಲಿಗೆ ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿದೆ. ಕಾಯ್ದೆ ಜಾರಿಗೊಳಿಸದ ಸರ್ಕಾರ ಕಾನೂನು ಉಲ್ಲಂಘನೆ ಹೆಸರಿನಲ್ಲಿ ಜೀತವಿಮುಕ್ತರ ಮೇಲೆ ಪ್ರಹಾರ ನಡೆಸುವುದು ತೀರಾ ಅಮಾನವೀಯವಾಗಿದೆ. ಗಂಗೂರಿನ ಜೀತ ವಿಮುಕ್ತರ ಮೇಲೆ ಹೂಡಲಾಗಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. ಹಾಗೂ ಜೀತವಿಮುಕ್ತರಿಗೆ ಭೂಮಿ ನೀಡುವ ಶಾಸನಬದ್ಧ ಭರವಸೆಯ ಅಂಗವಾಗಿ ಗಂಗೂರಿನ ಎಲ್ಲಾ ಜೀತವಿಮುಕ್ತರಿಗೆ ತಕ್ಷಣವೇ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. 
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಯೋಜಕರಾದ ರಾಜಶೇಖರ್, ಹಿರಿಯ ದಲಿತ ಮುಖಂಡರರಾದ ಎಚ್.ಕೆ.ಸಂದೇಶ್, ದಲಿತ ಹಕ್ಕುಗಳ ಸಮಿತಿ ಹಾಸನ ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ., ಚಲವಾದಿ ಮಹಾಸಭಾದ ತಾಲೂಕು ಉಪಾಧ್ಯಕ್ಷ ಲಿಂಗರಾಜು, ದಸಂಸ ಮುಖಂಡರಾದ ರಮೇಶ್ ಮರಿಲಕ್ಕಿ, ದುಮ್ಮಿ ಕೃಷ್ಣ, ಸಿಐಟಿಯು ತಾಲೂಕು ಕಾರ್ಯದರ್ಶಿ ಅಶೋಕ್, ಗಂಗೂರು ಗ್ರಾಮದ  ಜೀತವಿಮುಕ್ತರಾದ  ಮಹೆಶ್ ಶಿವರಾಜ್, ರಾಮಯ್ಯ, ರವಿ, ಮಹದೇವ್, ಶರತ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments