ಅರಕಲಗೂಡು: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಎತ್ತಿನ ಬಂಡಿ ಏರಿ ಸೈಕಲ್ ಜಾಥಾ ಹಮ್ಮಿಕೊಂಡು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೈಪಾಸ್ ರಸ್ತೆ ಬಳಿ ಪಕ್ಷದ ಅಪಾರ ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿ ಸಂತೆಮರೂರು ಕನಕದಾಸ ವೃತ್ತದ ಮೂಲಕ ಪೇಟೆ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಅನಕೃ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ 50 ಪೈಸೆ ತೈಲ ಬೆಲೆ ಏರಿಕೆಯಾದರೆ ರಸ್ತಿಗಿಳಿದು ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದ ಬಿಜೆಪಿ ಮುಖಂಡರು ಈಗ ಪೆಟ್ರೋಲ್ ಬೆಲೆ 105 ರೂ ದಾಟಿದರೂ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದಾರೆ. ಪ್ರತಿ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿ ಕೋಟಿಗಟ್ಟಲೆ ತೆರಿಗೆ ಹಣ ಸಂಗ್ರಹಿಸಿದರೂ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯಲಾಗುತ್ತಿದೆ. ಅದಾನಿ, ಅಂಬಾನಿ ಅವರಂತ ದೊಡ್ಡ ದೊಡ್ಡ ಕಾರ್ಪೋರೇಟರ್‌ಗಳಿಗೆ ಮಣೆ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಸಂಕಷ್ಟ ಅರ್ಥವಾಗುತ್ತಿಲ್ಲ. ಕರೊನಾ ಕಾಲದ ಲಾಕ್‌ಡೌನ್ ಹೇರಿಕೆ ವೇಳೆ ಜನರ ಜೀವನ ನಿರ್ವಹಣೆ ಸಾಧ್ಯವಾಗದೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಬೀದಿಯಲ್ಲಿ ಜನ ಸಾಯುತ್ತಿರುವುದನ್ನು ಎಲ್ಲರೂ ಕಂಡಿದ್ದೇವೆ. ಉತ್ತಮ ಅಡಳಿತ ನೀಡಲು ವಿಫಲವಾದ ಬಿಜೆಪಿ ದುರಾಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ ಹೊರತು ಅಭಿವೃದ್ಧಿ ಕೆಲಸಗಳು ಕುಂಠಿತಗೊAಡಿವೆ. ಇಂತಹ ಜನ ವಿರೋಧಿ ಕೆಟ್ಟ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾರು ಬರುತ್ತಾರೆ ಹೋಗುತ್ತಾರೆ ಎನ್ನುವುದು ಮುಖ್ಯವಲ್ಲ, ಪಕ್ಷಕ್ಕಾಗಿ ದುಡಿಯಬೇಕು. ಅಧಿಕಾರಕ್ಕಾಗಿ ಬರುವುವವರಿಗೆ ಅಲ್ಲ ಎಂದು ಕಾಂಗ್ರೆಸ್ ಕದ ತಟ್ಟುತ್ತಿರುವ ವಿರೋಧ ಪಕ್ಷದ ಮುಖಂಡರ ಹೆಸರು ಹೇಳದೆ ಚುಚ್ಚಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯ ಮಾತನಾಡಿ, ಆಹಾರ ಭದ್ರತಾ ಯೋಜನೆ ಜಾರಿಗೊಳಿಸಲಾಗದೆ ಕೇಂದ್ರ ಸರ್ಕಾರ ಕೇವಲ ಬಡವರ ಕಣ್ಣೊರೆಸುವ ಕುತಂತ್ರದಲ್ಲಿ ನಿರತವಾಗಿದೆ. ಕಳೆದ ಏಳು ವರ್ಷಗಳಲ್ಲಿ 21 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದರೂ ಜನಸಾಮಾನ್ಯರ ಬದುಕು ಸುಧಾರಿಸಲಾಗಿಲ್ಲ. 414 ರೂ ಇದ್ದ ಗ್ಯಾಸ್ ಸಿಲಿಂಡರ್ ದರವನ್ನು 854 ರೂಗೆ ಏರಿಸಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನರು ಜೀವನ ಸಾಗಿಸುವುದೇ ದುರಸ್ತರವಾಗಿದೆ. ಅಚ್ಚೇ ದಿನ ಬರುವುದಾಗಿ ಹಸಿ ಸುಳ್ಳು ಹೇಳಿ ನಂಬಿಸುತ್ತಿರುವ ಮೋದಿ ಅವರು ಒಳ್ಳೆ ದಿನಗಳನ್ನು ತರಲು ಇನ್ನೆಷ್ಟು ಕಾಲ ಬೇಕು ಎಂದು ಲೇವಡಿ ಮಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅಗತ್ಯ ವಸ್ತುಗಳ ಬೆಲೆ ಏರಿಸಿದ ಬಿಜೆಪಿ ಸರ್ಕಾರದ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು. ಅರಕಲಗೂಡು ಎಂದರೆ ಕಾಂಗ್ರೆಸ್, ಲವ ಕುಶರಂತಿರುವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಒಂದು ನಾಯಿ ಮೇಲೆ ಟವೆಲ್ ಎಸೆದರೂ ಇಲ್ಲಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಅಧಿಕಾರಕ್ಕಾಗಿ ಪಕ್ಷಕ್ಕೆ ಬರಲು ಹಪಹಪಿಸುತ್ತಿರುವ ವಿರೋಧಿಗಳ ವಿರುದ್ದ ಗುಡುಗಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಶಾಸಕ ಸಿ.ಎಸ್. ಪುಟ್ಟೇಗೌಡ, ಮುಖಂಡರಾದ ಬಾಗೂರು ಮಂಜೇಗೌಡ, ಡಾ. ದಿನೇಶ್ ಭೈರೇಗೌಡ, ಎಂ.ಕೆ. ಶೇಷೇಗೌಡ ಮಾತನಾಡಿದರು. ಕೆಪಿಸಿಸಿ ಸದಸ್ಯ ಮಂಜುನಾಥ್, ಮುಖಂಡರಾದ ಎಚ್.ಕೆ. ಜವರೇಗೌಡ, ಹೊನ್ನಿಕೊಪ್ಪಲು ಮಂಜು, ಗೊರೂರು ರಂಜಿತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮುಂತಾದ ಪ್ರಮುಖರು ಪಾಲ್ಗೊಂಡಿದ್ದರು.
ಸಂಪಾದಕ - ರವಿ
0 Comments