ಅರಕಲಗೂಡು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಲ್ಲೂರು, ಪೇಟೆ ಮಾಚಗೌಡನಹಳ್ಳಿ, ಸುಭಾಷ್ ನಗರ ಗ್ರಾಮಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ಮನೆಗಳನ್ನು ೧೫ ದಿನಗಳಲ್ಲಿ ಪೂರ್ಣಗೊಳಿಸುವಂತೆ ಶಾಸಕ ಎ.ಟಿ. ರಾಮಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮಗಳಿಗೆ ತೆರಳಿ ವಸತಿ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾಗಳ ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ೨೨೦ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹೆಚ್ಚುವರಿಯಾಗಿ ದೊರೆತಿದ್ದ ೨೬೦ಮನೆಗಳು ವಾಪಸ್ಸಾಗಿವೆ.ಇದಕ್ಕೆ ಮಂಡಳಿ ಅಧಿಕಾರಿಗಳ ಬೇಜವ್ದಾರಿ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಅನುದಾನ ೩.೫೦ಲಕ್ಷ ರೂ,ಫಲಾನುಭವಿಯಿಂದ ೪೮ ಸಾವಿರ ರೂ ಹಾಗೂ ಬ್ಯಾಂಕಿನ ಸಾಲ ೮೪ಸಾವಿರ ರೂ ಸೇರಿದಂತೆ ಒಂದು ಮನೆ ನಿರ್ಮಾಣಕ್ಕೆ ಒಟ್ಟು ೪.೮೨ ಲಕ್ಷ ರೂ ದಂತೆ ೨೨೦ಮನೆಗಳಿಗೆ ೧.೬ ಕೋಟಿ ರೂ ವೆಚ್ಚವಾಗಲಿದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು.
ಮನೆ ನಿರ್ಮಿಸಿಕೊಳ್ಳುತ್ತಿರುವ ಬಹಳಷ್ಟು ಫಲಾನುಭವಿಗಳಿಗೆ ಜಾಗದ ಖಾತೆಯಾಗಿಲ್ಲ. ಹೀಗಿದ್ದರೂ ಮನೆ ನಿರ್ಮಿಸಿ ಕೊಡುವ ಕೆಲಸ ನಡೆದಿದ್ದು ಇದರಿಂದ ಮುಂದೆ ಸಮಸ್ಯೆ ಎದುರಾಗಲಿದೆ. ಜಾಗಕ್ಕೆ ಸಂಬAಧಿಸಿದ ದಾಖಲೆಗಳನ್ನು ಪರಿಶೀಲಿಸಿ ೧೫ ದಿನಗಳಲ್ಲಿ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಪಪಂ ಮುಖ್ಯಾಧಿಕಾರಿ ಶಿವಕುಮಾರ್ ಗೆ ಸೂಚಿಸಿದರು. ಹಾಸನಕ್ಕೆ ಭೇಟಿ ನೀಡಿದ್ದ ವಸತಿ ಸಚಿವರೊಂದಿಗೆ ವಾಪಸ್ಸಾಗಿರುವ ಮನೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಆರಂಭಗೊಂಡಿರುವ ಮನೆಗಳು ಪೂರ್ಣಗೊಂಡ ಬಳಿಕ ೨೬೦ ಮನೆಗಳನ್ನು ಮಂಜೂರು ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಪಟ್ಟಣ ವ್ಯಾಪ್ತಿಯ ೧೮ ಸ್ಥಳ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೇರಿವೆ.ಈ ಭಾಗದಲ್ಲಿ ಉಳಿದ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಂಡಳಿ ಇಂಜಿನಿಯರ್ ಗಳು, ಪಪಂ ಸದಸ್ಯರು ಗ್ರಾಮದ ಮುಖಂಡರು ಇದ್ದರು.
ಸಂಪಾದಕ - ರವಿ
0 Comments