ಇಂದಿನಿಂದ ವೈದ್ಯರ ನಡೆ ಹಳ್ಳಿಯ ಕಡೆ ಮೂರನೇ ಸುತ್ತಿನ ಸಂಚಾರ, ಡಾ. ಸ್ವಾಮಿಗೌಡ

ಅರಕಲಗೂಡು: ಗ್ರಾಮೀಣ ಪ್ರದೇಶದ ಜನರಿಗೆ ಕರೊನಾ ಚುಚ್ಚು ಮದ್ದು ನೀಡಿ ಕೋವಿಡ್- 19 ಸೋಂಕು ನಿವಾರಣೆ ಮಾಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಜೂನ್ 21ರಿಂದ ವೈದ್ಯರ ನಡೆ ಹಳ್ಳಿಯ ಕಡೆ ಮೂರನೇ ಸುತ್ತಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವೈದ್ಯರ ನಡೆ ಹಳ್ಳಿಯ ಕಡೆ ಮೂರನೇ ಸುತ್ತಿನ ಕಾರ್ಯಕ್ರಮ ನಡೆಸಲಾಗುತ್ತಿದ್ದು 32 ಹಳ್ಳಿಗಳಲ್ಲಿ 3 ಸಾವಿರ ವ್ಯಾಕ್ಸಿನ್ ನೀಡಲಾಗುವುದು. ಹಳ್ಳಿಗಳಲ್ಲಿ ಆಯಾ ಸರ್ಕಾರಿ ಶಾಲೆಗಳಲ್ಲಿ 22 ಕೇಂದ್ರಗಳನ್ನು ತೆರೆಯಲಾಗಿದೆ. 45 ವರ್ಷ ಮೇಲ್ಪಟ್ಟ ಎಲ್ಲರೂ ಯಾವುದೇ ಹಿಂಜರಿಕೆ ಇಲ್ಲದೆ ವ್ಯಾಕ್ಸಿನ್ ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕರೊನಾ ಚುಚ್ಚು ಮದ್ದು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ತಾಲೂಕಿನಲ್ಲಿ ಈಗಾಗಲೇ 50 ಸಾವಿರ ವ್ಯಾಕ್ಸಿನ್ ಹಾಕಲಾಗಿದೆ. ಮೊದಲನೆ ಡೋಸ್ ಪಡೆದ ಜನರು ಎರಡನೇ ಡೋಸ್ ಪಡೆಯುವುದು ಕಡ್ಡಾಯ. ತಾಲೂಕಿನಲ್ಲಿ ಇನ್ನೂ 1500 ಜನರು ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆದಿಲ್ಲ. ಇವರಿಗೆ ಈಗಾಗಲೇ ಅವಧಿ ಮೀರಿದೆ. ಒಂದೇ ಡೋಸ್ ಪಡೆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಿಲ್ಲ. ವ್ಯಾಕ್ಸಿನ್ ಲಭ್ಯವಿದ್ದು ಎರಡನೇ ಡೋಸ್ ತಪ್ಪದೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.


                      ಸಂಪಾದಕ- ರವಿ

Post a Comment

0 Comments