ಅರಕಲಗೂಡು: ದೇಶದಲ್ಲಿ ಹೆಚ್ಚುತ್ತಿರುವ ಅನ್ಯಾಯ, ಮೋಸ, ಲೂಟಿ, ಅಕ್ರಮ, ಭ್ರಷ್ಟಾಚಾರ ವ್ಯವಸ್ಥೆಯನ್ನು ಹತ್ತಿಕ್ಕಿ ಸಮಾಜವನ್ನು ಸರಿದಾರಿಗೆ ತರದಿದ್ದರೆ ಮುಂದೆ ಕೆಟ್ಟ ದಿನಗಳು ಕಾದಿವೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸುಕ್ಷೇತ್ರ ಅರಸೀಕಟ್ಟೆ ಅಮ್ಮ ದೇವಸ್ಥಾನ ಸಭಾಂಗಣದಲ್ಲಿ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು,
ರಾಷ್ಟ್ರದ ಸ್ವಾತಂತ್ರ‍್ಯಕ್ಕಾಗಿ ಹಲವಾರು ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಆದರೆ ನಾವು ದೇಶಕ್ಕೆ ಕೊಟ್ಟ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅನ್ಯಾಯ ಅನೀತಿ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದರು.
ಹಲವಾರು ವರ್ಷಗಳಿಂದ ಅರಸೀಕಟ್ಟೆ ಅಮ್ಮ ದೇವಸ್ಥಾನದ ಹುಂಡಿಯನ್ನೆ ಹೊತ್ತೊಯ್ದು ಆಧಾಯ ಸೋರಿಕೆಯಾಗುತ್ತಿತ್ತು. ಈಗ ಅಕ್ರಮವನ್ನು ತಡೆಗಟ್ಟಿ ಸಮಿತಿ ದೇವಸ್ಥಾನದ ಆದಾಯ ದ್ಚಿಗುಣಗೊಳಿಸಲು ಶ್ರಮಿಸಿದ್ದು ಸುಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಭಕ್ತರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಇಷ್ಟಾದರೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಸಮಿತಿ ಆಡಳಿತ ತಪ್ಪಿದ್ದರೆ ಕ್ರಮ ಆಗಲಿ. ದ್ವೇಷದ ರಾಜಕಾರಣ ಎದುರಿಸಲು ನಮಗೂ ನೈತಿಕ ಗುಂಡಿಗೆ ಇದೆ ಎಂದು ಶಾಸಕರ ವಿರುದ್ಧ ಗುಡುಗಿದರು.
ಧ್ವಜಾರೋಹಣ ನೆರವೇರಿಸಿ ಸನ್ಮಾನ ಸ್ವೀಕರಿಸಿದ ಮೈಸೂರು ಕರ್ನಾಟಕ ಮುಕ್ತ ವಿವಿ ನಿವೃತ್ತ ಪ್ರಾಧ್ಯಾಪಕ ಎ. ರಾಮಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ವಾತಂತ್ರ‍್ಯ ಲಭಿಸಿದ ನಂತರ ದೇಶ ಪ್ರಗತಿ ಸಾಧಿಸಿದೆ ಆದಾಗ್ಯೂ ಹೆಚ್ಚುತ್ತಿರುವ ಅನ್ಯಾಯ ಅನಾಚಾರ ಭ್ರಷ್ಟಾಚಾರವನ್ನು ಪ್ರಜ್ಞಾವಂತರಾಗಿ ತಡೆಗಟ್ಟಬೇಕಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್, ನಿವೃತ್ತ ಉಪನ್ಯಾಸಕರಾದ ಬಿ.ಇ. ಯೋಗೇಂದ್ರ, ಹಿರೇಹಳ್ಳಿ ಈರೇಶ್, ಸೈಯ್ಯದ್ ಸಝದ್ ಪಾಷಾ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಬಸವರಾಜು, ಸಮಿತಿ ಕಾರ್ಯದರ್ಶಿ ಕೃಷ್ಣೇಗೌಡ, ಖಜಾಂಚಿ ಸಿದ್ದರಾಮೇಗೌಡ ಇತರರಿದ್ದರು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಿಂದಲಹಳ್ಳಿ ಸುಮಾ, ಅಂಗವಿಲ ಕ್ರೀಡಾಪಟು ಕೆರೆಕೋಡಿ ನಂದಿತಾ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಅಪೂರ್ವ, ಉದ್ಯಮಿ ಲಕ್ಕೂರು ಜಯರಾಮ್, ಯುವ ಪ್ರಗತಿಪರ ಕೃಷಿಕ ಚಿಕ್ಕಬೊಮ್ಮನಹಳ್ಳಿ ನವೀನ್ ಅವರನ್ನು ಸನ್ಮಾನಿಸಲಾಯಿತು.
ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲೇಬೇಕಾಗಿದೆ. ಕರ್ನಾಟಕದಲ್ಲಿ ಹಾಸನ ಜಿಲ್ಲೆ ಉತ್ತಮ ಹೆಚ್ಚು ಪ್ರಸಿದ್ಧಿಗೆ ಪಾತ್ರವಾಗಿದೆ, ಶೈಕ್ಷಣಿಕವಾಗಿಯೂ ಉನ್ನತ ಸಾಧನೆ ಮೆರೆಯಬೇಕು. 2023ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 635ನೇ ರ‍್ಯಾಂಕ್ ಗಳಿಸಿದ್ದ ನಾನು ಈಗ ಐಪಿಎಸ್ ಹುದ್ದೆಗೆ ಆಯ್ಕೆ ಆಗಿದ್ದೇನೆ. ನನ್ನನ್ನು ಗುರುತಿಸಿ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಸನ್ಮಾನಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ
- ಸನ್ಮಾನಿತೆ ಸುಮಾ.
0 Comments