ಅರಕಲಗೂಡು: ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರೊಂದಿಗೆ ನಾನೇ ಖುದ್ದು ಸಂಪರ್ಕ ಸಾಧಿಸಿ ಕೈಜೋಡಿಸಿದ್ದೆ ಹೊರತು ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡರ ಪಾತ್ರ ಏನೇನೂ ಇಲ್ಲ ಎಂದು ಪಪಂ ಉಪಾಧ್ಯಕ್ಷ ಸುಭಾನ ಷರೀಫ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ನಾನು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ. ಮಾಜಿ ಅಧ್ಯಕ್ಷೆ ಶಾರದ ಪೃಥ್ವಿರಾಜ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಿತ್ತು. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಪಪಂ ಅಧ್ಯಕ್ಷರಾಗಿರುವ ಪ್ರದೀಪ್ ಕುಮಾರ್ ನಮ್ಮಿಬ್ಬರನ್ನು ಸಂಪರ್ಕಿಸದೆ ಜೆಡಿಎಸ್ ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರನ್ನು ಕರೆದೊಯ್ದು ಪ್ರವಾಸ ತೆರಳಿದ್ದರು. ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೇರಬೇಕೆಂಬ ಉದ್ದೇಶದಿಂದ ನಾನೂ ಕೂಡ ಇನ್ನುಳಿದ ಜೆಡಿಎಸ್, ಬಿಜೆಪಿ ಸದಸ್ಯರೊಂದಿಗೆ ಗುರುತಿಸಿಕೊಂಡಿದ್ದೆ. ಕೊನೆ ಕ್ಷಣದಲ್ಲಾದ ರಾಜಕೀಯ ಬದಲಾವಣೆಗಳಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೆ ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದೆ. ಶ್ರೇಯಸ್ ಪಟೇಲ್ ಅವರು ಸಂಸದರಾಗಲು ನಾನು ಕೂಡ ಸಾಕಷ್ಟು ಶ್ರಮವಹಿಸಿದ್ದೆ. ಆದರೆ ಸಂಸದರಿಗೆ ಅಲ್ಪ ಸಂಖ್ಯಾತರು ಅಧಿಕಾರ ಹಿಡಿಯುವುದು ಬೇಕಿರಲಿಲ್ಲ.
ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸಂಸದರು ಮತ ನೀಡದೆ ಅಧ್ಯಕ್ಷರಿಗೆ ಮಾತ್ರ ನೀಡಿ ತೆರಳಿ ನನಗೆ ಮೋಸ ಮಾಡಿದರು. ನಾನು ಜೆಡಿಎಸ್, ಬಿಜೆಪಿ ಸದಸ್ಯರ ಜತೆ ಗುರುತಿಸಿಕೊಳ್ಳಲು ಸ್ವಪಕ್ಷೀಯರು ನನ್ನನ್ನು ನಿರ್ಲಕ್ಷ್ಯಿಸಿದ್ದ ಕಾರಣವೇ ಹೊರತು ಮುಖಂಡ ಶ್ರೀಧರ್ ಗೌಡ ಅವರಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿನಾಕಾರಣ ಶ್ರೀಧರ್ ಗೌಡರ ಹೆಸರಿಗೆ ಮಸಿ ಬಳಿಯಲು ಹೊರಟಿರುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಪುಷ್ಪಕುಮಾರ್ ಮಾತನಾಡಿ, ಸೇಡಿನ ರಾಜಕಾರಣ ಮಾಡುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಪ್ರತಿ ವಿಧಾನಸಭಾ ಚುನಾವಣೆ ಯಲ್ಲೂ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡದೆ ಸ್ವಾರ್ಥ ರಾಜಕಾರಣ ಮಾಡಿದ್ದಾರೆ. ಎ. ಮಂಜು ಕಳೆದ ಎರಡು ಸಲ ಕಾಂಗ್ರೆಸ್ ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗಲೂ ಪಕ್ಷ ವಿರೋಧಿ ಕೆಲಸ ಮಾಡಿದರು. ಕಳೆದ ಬಾರಿ ಶ್ರೀಧರ್ ಗೌಡರ ಪರ ಕೆಲಸ ಮಾಡದೆ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಪರ ಕೆಲಸ ಮಾಡಿದರು. ಇವರದು ಯಾವ ಪಕ್ಷ ನಿಷ್ಠೆ. ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿರುವ ಪ್ರಸನ್ನ ಕುಮಾರ್ ಶ್ರೀಧರ್ ಗೌಡರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಇವರು ತಮ್ಮ ನಡವಳಿಕೆ ಬದಲಿಸದಿದ್ದರೆ ಹೈಕಮಾಂಡ್ ಗೆ ದೂರು ನೀಡಬೇಕಾಗುತ್ತದೆ ಎಂದು ಗುಡುಗಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿದರು. ಈಗ ಸರಿಯಾಗಿ ಮಾತನಾಡಲೂ ಬಾರದ ಕೃಷ್ಣೇಗೌಡ ಅವರಿಗೆ ಚುನಾವಣೆಯಲ್ಲಿ ಐವತ್ತು ಸಾವಿರ ಮತ ಕೊಡಿಸಿದೆ. ಮುಂದೆ ತಾನೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಳ್ಳುತ್ತಿರುವ ಪ್ರಸನ್ನ ಕುಮಾರ್ ಕೃಷ್ಣೇಗೌಡ ಅವರ ಬೆನ್ನಿಗೆ ಚೂರಿ ಹಾಕಲು ದಾರಿ ತಪ್ಪಿಸುವ ನಾಟಕವಾಡುತ್ತಿದ್ದಾರೆ. ಕೃಷ್ಣೇಗೌಡ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮುಂದೆ ದಿವಾಕರ್ ಗೌಡರ ಕಥೆ ಏನಾಗಲಿದೆ. ಹೊಳೆನರಸೀಪುರ ತಾಲೂಕಿನಲ್ಲಿ ರಾಜಕೀಯ ಮಾಡದೇ ದಿವಾಕರ್ ಗೌಡ ಅರಕಲಗೂಡು ತಾಲೂಕಿನ ರಾಜಕಾರಣಕ್ಕೆ ತಲೆಕೆಡಿಸಿಕೊಳ್ಳುತ್ತಿರುವ ದುರುದ್ದೇಶ ಏನು ಎಂದು ಹರಿಹಾಯ್ದರು.
ಮುಖಂಡ ಚಂದೇಗೌಡ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಕುರುಬ ಸಮುದಾಯಕ್ಕೆ ಎಳ್ಳಷ್ಟು ಕೊಡುಗೆ ನೀಡಿಲ್ಲ. ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಮುಖಂಡರಾದ ಕೆ.ಟಿ. ಸೋಮಶೇಖರ್, ದಶರಥ, ಪ್ರಕಾಶ್, ಸುರೇಶ್, ಇಸ್ರಾರ್ ಅಹಮದ್, ಸತ್ಯರಾಜ್ ಗೊಷ್ಠಿಯಲ್ಲಿದ್ದರು.
0 Comments