ಕಾವೇರಿ ಹೇಮಾವತಿ ನೀರಿನ ಸದ್ಬಳಕೆ ನಮಗೆ ಮತ್ತಷ್ಟು ಆಗಬೇಕು: ಎಂಟಿಕೆ

ಅರಕಲಗೂಡು: ಕಾವೇರಿ ಮತ್ತು ಹೇಮಾವತಿ ನದಿಯಿಂದ ಈ ಭಾಗದ ಬಹುತೇಕ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವ ಸಲುವಾಗಿ ಲಕ್ಕೂರು- ಸೋಂಪುರ ಹಾಗೂ ಕಣಿಯಾರು ಬಳಿ ಏತ ನೀರಾವರಿ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಹೇಳಿದರು.

ತಾಲೂಕಿನ ರಾಮನಾಥಪುರದಲ್ಲಿ ತುಂಬಿ ಹರಿಯುತ್ತಿರುವ ಪೂರ್ಣ ಕಾವೇರಿ ಹೊಳೆಗೆ ಶ್ರೀ ರಾಮೇಶ್ವರ ವಹ್ನಿ ಪುಷ್ಕರಣಿ ತಟದಲ್ಲಿ ಸೋಮವಾರ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿ ನದಿಗಳು ತುಂಬಿ ಹರಿದು ರೈತರಿಗೆ ಹಾಗೂ ನಾಡಿಗೆ ಒಳಿತಾಗಿದೆ. ಆದರೂ ತಾಲೂಕಿನಲ್ಲಿ ಜೀವನದಿ ಕಾವೇರಿ ಹಾಗೂ ಹೇಮಾವತಿ ಹೊಳೆ ಹಾದು ಹೋದರೂ ಹೆಚ್ಚಿನ ಅನುಕೂಲವಾಗಿಲ್ಲ. 

ಈ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ನದಿ ಮೇಲ್ಭಾಗದ ಸಾವಿರಾರು ಎಕರೆ ಸಾಗುವಳಿ ಜಮೀನು ನೀರಾವರಿ ಸೌಲಭ್ಯದಿಂದ ವಂಚಿತವಾಗಿ ಅನ್ನದಾತರಿಗೆ ಅನ್ಯಾಯವಾಗುತ್ತಿದೆ. ರೈತರ ಹಿತ ದೃಷ್ಟಿಯಿಂದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಮುಖಂಡರಾದ ಬಿ.ಜೆ. ರಾಮೇಗೌಡ, ಶ್ರೀಶೈಲ, ಗೋವಿಂದರಾಜು, ಚಿಕ್ಕಣ್ಣಶೆಟ್ಟಿ, ಕಾಂತರಾಜು, ಗಣೇಶ್, ರವೀಂದ್ರ, ನಾಗರಾಜು, ಕುಮಾರ್, ಯೋಗಣ್ಣ, ಮಂಜು, ಸುಬ್ರಹ್ಮಣ್ಯ, ಸುರೇಶ್, ಪುಟ್ಟರಾಜು, ಪ್ರಸನ್ನ,  ಮಹೇಶ್, ರಂಗಸ್ವಾಮಿ, ಕೇಶವೇಗೌಡ, ಜಮೀರ್, ದೇವರಾಜೇಗೌಡ ಇತರರಿದ್ದರು.

Post a Comment

0 Comments