ಅರಕಲಗೂಡು: ಪಟ್ಟಣದಲ್ಲಿ ಅಪೂರ್ಣಗೊಂಡಿರುವ ಕುವೆಂಪು ಭವನವನ್ನು ಅಭಿವೃದ್ಧಿ ಪಡಿಸಲು ಆದಿಚುಂಚನಗಿರಿ ಮಠದ ಸುಪರ್ದಿಗೆ ವಹಿಸಲಾಗಿದೆ. ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದಂತೆ ಕುವೆಂಪು ಭವನ ಅಭಿವೃದ್ಧಿ ಕಾಣಲು ಶ್ರೀಗಳು ಶ್ರಮ ವಹಿಸಬೇಕು. ಇದಕ್ಕೆ ನನ್ನ ಎಲ್ಲ ಸಹಕಾರ ಇದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಆದಿ ಚುಂಚನಗಿರಿ ಮಠ ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದು ವಿದ್ಯಾರ್ಥಿಗಳು ಗುರಿ ಸಾಧನೆ ಮಾಡಿ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು.ಎಂದರು.
ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಬೆಂಗಳೂರಿನಿಂದ ಇಲ್ಲಿಗೆ ರಾಜಕೀಯ ಪ್ರವೇಶಿಸಿದಾಗ ಕೆಲವರು ಅಪಹಾಸ್ಯ ಮಾಡಿದರು. ಇದನ್ನೆಲ್ಲ ಲೆಕ್ಕಿಸದೆ ಇಚ್ಚಾಶಕ್ತಿಯಿಂದ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದು ಜನಸೇವೆಯ ಗುರಿ ತಲುಪಿದೆ ತೃಪ್ತಿ ನನಗಿದೆ. ಹಾಗೆಯೇ ವಿದ್ಯಾರ್ಥಿಗಳು ಅನವಶ್ಯಕ ಸಂಗತಿಗಳಿಗೆ ಕಿವಿಗೊಡದೆ ಸಾಧನೆ ಮಾಡುವ ಛಲ ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಕಿವಿಮಾತು ಹೇಳಿದರು.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರದಂತೆಯೇ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿ ಉತ್ತೇಜಿಸುವ ಕೆಲಸ ಕೂಡ ಆಗಬೇಕು ಎಂದಾಗ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ಸುರಿಮಳೆ ಸುರಿಸಿದ್ದು ವಿಶೇಷವಾಗಿತ್ತು.
ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಸಲುವಾಗಿ ಶ್ರೀಗಳು ಪರಿಶ್ರಮ ವಹಿಸಿ ಶಾಲೆಯಲ್ಲಿ 50 ಕೊಠಡಿಗಳ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದ್ದಾರೆ. ಬಡ ಮಕ್ಕಳಿಂದ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ಒದಗಿಸಿ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ನೀಟ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಳಗ್ಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವೇದಿಕೆ ಕಂಗೊಳಿಸಿತು.
0 Comments