ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳನ್ನು ಅನಾವರಣಗೊಳಿಸಿದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಅಧಿಕಾರಿಗಳ ವಿರುದ್ದ ಗರಂ ಆದರು.
ಜನಸಾಮಾನ್ಯರಿಂದ ಬಂದ ಅರ್ಜಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಈ ವೇಳೆ ಬಹಳಷ್ಟು ಅರ್ಜಿಗಳು ರಸ್ತೆ ತೆರವು, ಪಹಣಿ ತಿದ್ದುಪಡಿ, ಪೌತಿ ಖಾತೆ, ಪಹಣಿ ತಿದ್ದುಪಡಿ, ಪೋಡ್ ಮಾಡುವುದು ಇಂತಹದೇ ಸಮಸ್ಯೆಗಳು ಪುನರಾವರ್ತನೆಯಾದಾಗ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ವಿರುದ್ದ ಹರಿಹಾಯ್ದರು. ನಿಮ್ಮ ವ್ಯಾಪ್ತಿಯಲ್ಲೆ ಬಗೆಹರಿಸಬಹುದಾದ ಬಹಳಷ್ಟು ಸಮಸ್ಯೆಗಳಿವೆ, ಆದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ 15 ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಎಚ್.ಆರ್.ಪಿ, ದರಕಾಸ್ತು, ಸೇರಿಂದತೆ ವಿವಿಧ ಯೋಜನೆಗಳಲ್ಲಿ ಭೂಮಿ ಮಂಜುರಾದವರಿಗೆ ನಮೂನೆ 1ರಿಂದ 5 ಆಂಧೋಲನ ನಡೆಸುತ್ತಿದ್ದು ದಾಖಲೆಗಳನ್ನು ಪರಿಶೀಲಿಸಿ ಮಂಝುರಾತಿಯನ್ನು ಕ್ರಮ ಬದ್ದಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಎಚ್.ಆರ್ ಪಿ ಭೂ ಮಂಜೂರಾತಿಯಲ್ಲಿ ಆಗಿರುವ ಹಗರಣಗಳ ಬಗ್ಗೆ ಅರಿವಿದೆ, 997 ಬೋಗಸ್ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ ಎಂದರು.
ರಾಮನಾಥಪುರ ಡಿಪೋ ದಲ್ಲಿ ಬಸ್ ಗಳು ಕೊಣನೂರಿಗೆ ಹೋಗಿ ಬರಬೇಕು ಎಂಬ ನಿಯಮ ಇದ್ದರೂ ಪ್ರಯಾಣಿಕರನ್ನು ರಾಮನಾಥಪುರದಲ್ಲೆ ಇಳಿಸುತ್ತಿವೆ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ, ಡಿಪೋ ವ್ಯವಸ್ಥಾಪಕರು ಪ್ರಯಾಣಿಕರ ಸಮಸ್ಯೆಗಳಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಎ. ಮಂಜು ಡಿಪೋ ವ್ಯವಸ್ಥಾಪಕ ಕೃಷ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಸರಿಪಡಿಸಬೇಕು, ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಶಾಲಾ ಕಾಲೇಜುಗಳ ಬಳಿ ಬಸ್ ನಿಲುಗಡೆ ನೀಡುವಂತೆ ಸೂಚಿಸಿರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹೆರಿಗೆ ನಡೆಸದೆ ಹಾಸನ, ಹೊಳೆನರಸೀಪುರಕ್ಕೆ ಕಳಿಸಲಾಗುತ್ತಿದೆ ಎಂದು ದಸಂಸ ಮುಖಂಡರು ದೂರಿದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಕೊಣನೂರು ಗ್ರಾಪಂ ಪೌರಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ ಈ ಸ್ವತ್ತು ಮಾಡಿಕೊಡದೆ ಸತಾಯಿಸುತ್ತಿರುವ ಕುರಿತು ಬಂದ ದೂರಿಗೆ 20 ದಿನದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮ ತಾಪಂ ಇಒಗೆ ಸೂಚಿಸಿದರು. ಸಾರ್ವಜನಿಕರಿಂದ ಬಂದ ಎಲ್ಲ ಅರ್ಜಿಗಳ ಕುರಿತು ಪರಿಶೀಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.
ವಿವಿಧ ಇಲಾಖೆ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಎಡಿಸಿ ಕೆ.ಟಿ. ಶಾಂತಲಾ, ಎಎಸ್.ಪಿ. ಮಹಮದ್ ಸುಜೀತಾ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ, ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸಮಸ್ಯೆಗಳಿಗೆ ಸ್ಪಂದಿಸಲು ತಾಕೀತು
ಅರಕಲಗೂಡು: ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು ಜನಸ್ಪಂದನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ಅಧಿಕಾರಿಗಳು ತಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಜನರ ಬಹಳಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಸಮಸ್ಯೆಗಳಿಗೆ ಒಂದು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ. ಇಲ್ಲಿ ಸಾಧ್ಯವಾಗದ ಪ್ರಕರಣಗಳನ್ನು ಮೇಲಿನ ಹಂತಕ್ಕೆ ಕಳಿಸಲಾಗುವುದು. ಎಲ್ಲ ಇಲಾಖೆಗಳು ಜನರ ಸಮಸ್ಯೆಗಳಿಗೆ ಸ್ಫಂದಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಮಂಜು ಮಾತನಾಡಿ, ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳು ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಜನರನ್ನು ಅಲೆದಾಡಿಸುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಿ ಸಮಸ್ಯೆ ಉಲ್ಬಣಿಸಲು ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ಬೇಜವಾಬ್ದಾರಿ ತನದಿಂದ ವರ್ತಿಸುವ ಅಧಿಕಾರಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
0 Comments