ತೆಂಗು ಬೆಳೆ ಲಾಭದಾಯಕ ವಾಗಿಸುವೆ; ಎ. ಮಂಜು ಸಲಹೆ

ಅರಕಲಗೂಡು: ತೆಂಗು ಬೆಳೆಯನ್ನು ಲಾಭದಾಯಕವಾಗಿಸುವ ಉದ್ದೇಶದಿಂದ ತಾಲೂಕಿನ ರೈತರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ತಾಲೂಕಿನ ಬೆಳವಾಡಿ ಸಮಯದಾಯ ಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಾತ್ಯಕ್ಷತೆ ಕಾರ್ಯಕ್ರಮದಡಿ  ಶನಿವಾರ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 

ತೆಂಗು ಬೆಳೆ ನಮ್ಮ ತಾಲೂಕಿನಲ್ಲಿ ಸಾಂಪ್ರದಾಯಿಕ ಬೆಳೆಯಲ್ಲ, ಹಾಗಾಗಿ ಕೇಂದ್ರ ಸರ್ಕಾರ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಬೆಳೆಗಾರರಿಗೆ ಮಾತ್ರ ಹಲವಾರು ಪರಿಕರಗಳು, ಸೌಕರ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು. ತಾಲೂಕಿನಲ್ಲಿಯೂ ತೆಂಗು ಬೆಳೆ ಅಭಿವೃದ್ಧಿ ಪಡಿಸಿ ಬೆಳೆಗಾರರಿಗೆ ಬೆಳೆ ಲಾಭದಾಯಕವಾಗಿ ಪರಿವರ್ತಿಸುವ ಸದುದ್ದೇಶದಿಂದ ಅರಕಲಗೂಡು ತಾಲೂಕಿನ ಬೆಳೆಗಾರರಿಗೂ ಸೌಕರ್ಯಗಳನ್ನು ತಲುಪಿಸುವಂತೆ ಶ್ರಮ ವಹಿಸಿದ್ದರ ಫಲವಾಗಿ ಸರ್ಕಾರ ವಿವಿಧ ಪರಿಕರಗಳನ್ನು ಒದಗಿಸಿದೆ. ರೈತರು ಇವುಗಳನ್ನು ಮಾರಾಟ ಮಾಡದೆ ಬೆಳೆಗೆ ವಿನಿಯೋಗಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರು ಕೃಷಿಯಲ್ಲಿ ಆರ್ಥಿಕವಾಗಿ ಉನ್ನತಿ ಕಾಣಲು ಹೈನುಗಾರಿಕೆ ಅವಲಂಬಿಸಬೇಕು. ಜಾನುವಾರುಗಳನ್ನು ಸಾಕಾಣಿಕೆ ಮಾಡುವುದರಿಂದ ತೆಂಗು ಬೆಳೆಗೆ ಕೊಟ್ಟಿಗೆ ಗೊಬ್ಬರ ಸಾಗಿಸಿ ಜಮೀನು ಫಲವತ್ತತೆ ಹೆಚ್ಚಿಸಿಕೊಳ್ಳಬಹುದು. ಇದರಿಂದ ಕೌಟುಂಬಿಕವಾಗಿಯೂ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್  ತೆಂಗು ಬೆಳೆಗೆ ನೀಡುವ ಪೋಷಕಾಂಶಗಳ ಕುರಿತು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಮಹದೇವ, ಮಾಜಿ ಅಧ್ಯಕ್ಷೆ ಶಿವಮ್ಮ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ನಿಂಗೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ಯಗಟಿ ಕುಮಾರ್ ಹಾಗೂ ರೈತರು ಇದ್ದರು. ತೆಂಗು ಬೆಳೆಗಾರರಿಗೆ ಶಾಸಕ ಎ. ಮಂಜು ವಿವಿಧ ಪರಿಕರಗಳನ್ನು ವಿತರಿಸಿದರು.

Post a Comment

0 Comments