ಅರಕಲಗೂಡು: ರಾಜಕೀಯ ಅಧಿಕಾರವೇ ಹೀಗೆ! ತಾಲೂಕಿನ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ಮಂಗಳವಾರ ಬೆಂಬಲಿಗರ ಸಭೆ ನಡೆಸಿದ ಮಾಜಿ ಸಚಿವ ಎ. ಮಂಜು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿಕೊಂಡು ತಮ್ಮ ಗೆಲುವಿಗೆ ಸಹಕರಿಸುವಂತೆ ಪ್ರತಿಜ್ಞಾ ವಿಧಿ ಭೋದಿಸಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಯಿತು.
ಸಭೆಯಲ್ಲಿ ಅಪಾರ ಬೆಂಬಲಿಗರು ಪಾಲ್ಗೊಂಡಿದ್ದರು. ಮಾ. 16ರಂದು ಅರಕಲಗೂಡಿಗೆ ಆಗಮಿಸುವ ಜೆಡಿಎಸ್ ಪಂಚರತ್ನ ಯಾತ್ರೆ ರಥವನ್ನು ಸ್ವಾಗತಿಸುವ ಕುರಿತು ರೂಪು ರೇಷೆಗಳ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿದರು.
ಬಳಿಕ ಸ್ವತಃ ಎ. ಮಂಜು ಅವರೇ ಕಾರ್ಯಕರ್ತರಿಗೆ ಇನ್ನು ಮುಂದೆ ಜೆಡಿಎಸ್ ಪಕ್ಷಕ್ಕೆ ಸೇರುವ ಮೂಲಕ ನಾವೆಲ್ಲ ಜೆಡಿಎಸ್. ನೀವೆಲ್ಲ ಸೇರಿ ಎ. ಮಂಜು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು, ಹಳ್ಳಿಗಳಲ್ಲಿ ಮತದಾರರಿಗೆಲ್ಲ ತಿಳಿಸಿ ಸಹಕರಿಸಬೇಕು ಎಂದು ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದರು.
ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊರ ಬಿದ್ದು ರಾಜಕೀಯವಾಗಿ ಅತಂತ್ರ ಸ್ಥಿತಿ ಕಾಡುತ್ತಿದ್ದ ಎ. ಮಂಜು ಅವರ ಅಭಿಮಾನಿಗಳಲ್ಲಿದ್ದ ಗೊಂದಲ ಕೂಡ ನಿವಾರಣೆ ಕಂಡಂತಾಗಿದೆ.
ದೇವೇಗೌಡರ ಆಶೀರ್ವಾದ ಪಡೆದ ಮಂಜು: ಚುನಾವಣೆಗೂ ಮುನ್ನವೇ ಮಾಜಿ ಸಚಿವ ಎ. ಮಂಜು ಅವರು ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಗಂಟೆಗೂ ಹೆಚ್ಚುಕಾಲ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸಾಥ್ ನೀಡಿದ್ದಾರೆ. ಈ ಚಿತ್ರಗಳು ಕಾರ್ಯಕರ್ತರಲ್ಲಿದ್ದ ಗೊಂದಲಕ್ಕೆ ತೆರೆ ಎಳೆದವು.
0 Comments