ಅರಕಲಗೂಡು ಕೋಟೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮ

ಅರಕಲಗೂಡು:   ಪಟ್ಟಣದ  ಕೋಟೆ ಐತಿಹಾಶಿಕ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. 

ರಥೋತ್ಸವದ ಹಿನ್ನೆಲೆಯಲ್ಲಿ  ಕಳೆದ ಮೂರು ದಿನಗಳಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ವಿಧಿವತ್ತಾಗಿ ನಡೆಸಿಕೊಂಡು ಬರಲಾಗಿತ್ತು.  ಮಂಗಳವಾರ ಬೆಳಿಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ  ಅಭೀಷೇಕ. ಅರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ಉತ್ಸವ ಮೂರ್ತಿಗಳನ್ನು ಅಲಂಕರಿಸಿ  ಪೂಜೆ ಸಲ್ಲಿಸಿ ಕೃಷ್ಣ ಗಂಧೋತ್ಸವ ನಡೆಸಲಾಯಿತು.  

ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಅಲಂಕರಿಸಿದ  ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಶಿರಸ್ತೆದಾರ್ ಅಂಕೇಗೌಡ ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ರಥಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.  ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಮನೆ,ಮನೆಗಳಲ್ಲಿ ಮಜ್ಜಿಗೆ, ಪಾನಕ, ನೀರನ್ನು ನೀಡಿ ಬಿಸಿಲಿನ ಬೇಗೆ ನೀಗಿಸಲಾಯಿತು. 

 ಉಪ್ಪಾರ ಸಮುದಾಯದ ಹೂವಿನ ವ್ಯಾಪಾರಸ್ಥರು ರಥಕ್ಕೆ ಸುಗಂಧರಾಜ, ಗುಲಾಬಿ, ಧವನ ಪತ್ರ  ಮುಂತಾದ40 ಕೆಜಿ ಹೂವುಗಳಿಂದ ಕಟ್ಟಿದ್ದ ಭಾರಿ ಗಾತ್ರದ ಹಾರ ಹಾಗೂ  ವಿವಿಧ ಹೂವುಗಳ ಮಾಲೆಗಳಿಂದ ತೇರನ್ನು  ಸಿಂಗರಿಸಿದ್ದು ಭಕ್ತರ ಮನ ಸೆಳೆಯಿತು.  ತೇರು ಸ್ವಸ್ಥಾನ ಸೇರಿದ ಬಳಿಕ ದೇವಾಲಯದಲ್ಲಿ ಮಹಾಮಂಗಳಾರತಿ  ಪ್ರಸಾದ ವಿನಿಯೋಗ ನಡೆಸಲಾಯಿತು. ಉಪ್ಪಾರ ಸಮುದಾಯದವರು ಭಕ್ತರಿಗೆ ಸಾಮೂಹಿಕ  ಅನ್ನದಾಸೋಹ ನಡೆಸಿದರು.

Post a Comment

0 Comments