ಅರಕಲಗೂಡು: ಕಾಂಗ್ರೆಸ್ ಟಿಕೆಟ್ ೧೫ ಕೋಟಿಗೆ ಮಾರಾಟವಾಗಿದೆ ಎಂದು ಜನರೇ ಮಾತನಾಡುತ್ತಿದ್ದಾರೆ, 'ನಾವು ಯಾರನ್ನೂ ಪಕ್ಷದಿಂದ ಹೊರ ಹಾಕಿಲ್ಲ, ಯಾರ ಮನೆ ಬಾಗಿಲಿಗೂ ಹೋಗಲ್ಲ ಎನ್ನುತ್ತಿದ್ದ ವ್ಯಕ್ತಿ ಇನ್ನೆರಡು ದಿನದಲ್ಲಿ ಎಲ್ಲಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ’ ಎಂದು ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಎ.ಟಿ. ರಾಮಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಅರಕಲಗೂಡು ಮತ್ತು ಅರಸೀಕೆರೆ ಕ್ಷೇತ್ರದ ರಾಜಕಾರಣದಲ್ಲಿ ಏನು ನಡೆಯುತ್ತಿದೆ ಇವರು ಯಾರ ಸಂಪರ್ಕದಲ್ಲಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಮಸ್ವಾಮಿಗೆ ಟಿಕೆಟ್ ಕೊಡುವುದು ಬೇಡವೆಂದು ಸಾವಿರಾರು ಜನ ಹೊಳೆನರಸೀಪುರದ ನನ್ನ ಮನೆ ಮುಂದೆ ಪ್ರತಿಭಟನೆ ನಡೆಸಿದಾಗ ದಯಮಾಡಿ ಹೋಗಿ ವರಿಷ್ಠರು ತೀರ್ಮಾನಿಸುತ್ತಾರೆ ಎಂದಿದ್ದೆ. ಪಾಪಣ್ಣಿಗೆ ಟಿಕೆಟ್ ಕೊಡುವಷ್ಟು ಯಾರಾದರೂ ದಡ್ಡರಿಲ್ಲ. ನಾನೇ ರಾಮಸ್ವಾಮಿ ಮನೆಗೆ ಎರಡು ಬಾರಿ ಭೇಟಿ ನೀಡಿದ್ದೆ. ದೇವೇಗೌಡರ ಬರುವ ಕಾರ್ಯಕ್ರಮಕ್ಕೆ ಜನರನ್ನು ಕರೆಸಲು ಅರಕಲಗೂಡು ತಾಲೂಕನ್ನು ನೀವು ನೋಡಿಕೊಳ್ಳಿ ಹಳ್ಳಿಮೈಸೂರು ಹೋಬಳಿ ಜವಾಬ್ದಾರಿ ನನಗಿರಲಿ ಎಂದು ಹೇಳಿ ಮನವೊಲಿಸಿದ್ದೆ, ನಾವು ಯಾರನ್ನು ಹೊರ ಹಾಕಿಲ್ಲ. ನಾವೇನು ಅಪ್ಪ ಮಕ್ಕಳನ್ನು ಹೊರ ಕಳಿಸಿದ್ದೇವೆಯೇ ಎಂದು ರಾಮಸ್ವಾಮಿ ವಿರುದ್ದ ಹರಿಹಾಯ್ದರು.
ಹಾಸನ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ದೇವೇಗೌಡರು ಸ್ಪರ್ಧಿಸಿದ್ದಾಗ ಕಷ್ಟದ ಸಮಯಸಲ್ಲಿ ಒಮ್ಮೆ ಮಂಜಣ್ಣ ಸಹಾಯ ಮಾಡಿದ್ದರು. ಈ ವಿಚಾರವಾಗಿ ನಾವು ರಾಮಸ್ವಾಮಿ ಅವರನ್ನು ನೆನೆಯುತ್ತೇವೆ. ಜೆಡಿಎಸ್ ಸೇರುವ ಸಂಬAಧ ನಾನು ಮಂಜಣ್ಣ ಬಳಿ ಹೋಗಿ ಕೇಳಲಿಲ್ಲ, ಪ್ರಜ್ವಲ್ ರೇವಣ್ಣ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದ್ದು ನಾನು ಕೇಸ್ ವಾಪಾಸ್ಸು ತೆಗೆದುಕೊಳ್ಳುವಂತೆ ಮಂಜಣ್ಣನಿಗೆ ಹೇಳಿಲ್ಲ. ಕಾಂಗ್ರೆಸ್ ಮುಖಂಡರು ಯಾರು ಯಾರ ಮನೆ ಬಾಗಿಲಿಗೆ ತಿರುಗಿದ್ದಾರೆ, ಕಾಂಗ್ರೆಸ್‌ನ ಒಂದು ಟಿಕೆಟ್ ಹದಿನೈದು ಕೋಟಿಗೆ ಮಾರಾಟ ಆಗಿರುವುದಾಗಿ ಜನರೇ ಮಾತನಾಡುತ್ತಿದ್ದಾರೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಮಂಜಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವಂತೆ ಕಾರ್ಯಕರ್ತರ ತೀರ್ಮಾನ ಪಡೆಯಲಾಗಿದೆ. ಕಾರ್ಯಕರ್ತರು ಸಹ ಇವರ ಕೈ ಬಿಡುವುದಿಲ್ಲ. ಮಾ. 16ರಂದು ಪಂಚರತ್ನ ಯಾತ್ರೆ ವೇಳೆ ಎ. ಮಂಜು ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಗುವುದು ಎಂದರು.
ದೇವೇಗೌಡರು ಸಿದ್ದರಾಮಯ್ಯ ಅವರನ್ನು ಮೂರು ಬಾರಿ ಉಪ ಮುಖ್ಯಮಂತ್ರಿ ಮಾಡಿದ್ದರು. ದಿ. ಎ. ದೊಡ್ಡೇಗೌಡ ಅವರನ್ನು ಎಂಎಲ್‌ಸಿ ಮಾಡಿದ್ದರು. ಕುರುಬರಿಗೆ ರಾಜಕೀಯವಾಗಿ ಸಾಕಷ್ಟು ಪ್ರಾನಿಧ್ಯ ಕಲ್ಪಿಸಿದ್ದೇನೆ. ಶ್ರೀನಿವಾಸ್ ಅವರಿಗೆ ಜಿಪಂ ಉಪಾಧ್ಯಕ್ಷ ಸ್ಥಾನ ಕೊಡಿಸಿದ್ದೆ, ಜೆಡಿಎಸ್‌ನಲ್ಲಿ ಅಧಿಕಾರ ಅನುಭವಿಸಿದವರು ಪಕ್ಷದಿಂದ ಹೊರ ಹೋಗಿದ್ದಾರೆ. ಅರಸೀಕೆರೆಯಲ್ಲಿ ರಣರಂಗಕ್ಕೆ ಕರೆದಿದ್ದು ಇದಕ್ಕೆಲ್ಲ ನಾನು ಹೆದರಲ್ಲ. ಕೊಟ್ಟ ದುಡ್ಡ ವಾಪಾಸ್ಸು ಕೊಡಿ ಎಂದು ನಾವು ಕೇಳಿಲ್ಲ, ಮತಗಳನ್ನು ದುಡ್ಡಿಗೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ ಎಂದು ಶಿವಲಿಗೇಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ಇಳಿ ವಯಸ್ಸಿನಲ್ಲೂ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅನ್ನು ಸ್ವಂತ ಬಲದಲ್ಲಿ ಅಧಿಕಾರಕ್ಕೆ ತರುವ ಸಲುವಾಗಿ ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ದಾರೆ. ಯಾರು ಪಕ್ಷ ತೊರೆದರೂ ಜನ ನಮ್ಮ ಕೈಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಶೂನ್ಯ, ಕೋಟಿಗಟ್ಟಲೆ ಹಣ ಪಡೆದು ಮದ್ಯದಂಗಡಿಗಳನ್ನು ತೆರೆದಿದ್ದೆ ಬಿಜೆಪಿ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು. ಬೆಂಗಳೂರು- ಮೈಸೂರು ಹೆದ್ದಾರಿಗೆ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಶೇ. 99ರಷ್ಟು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ರಾಜ್ಯಕ್ಕೆ ಬಿಜೆಪಿ ಕೊಡುಗೆ ಇಲ್ಲದಿದ್ದರೂ ಪ್ರಧಾನಿ ಮೋದಿ ಪದೇ ಪದೇ ಭೇಟಿ ನೀಡುತ್ತಿದ್ದಾರೆ. 40 ಫರ್ಸೆಂಟ್ ಬಿಜೆಪಿ ಸರ್ಕಾರಕ್ಕೆ ಗುತ್ತಿಗೆದಾರರಿಗೆ ಕೊಡಲು ದುಡ್ಡಲ್ಲದಷ್ಟು ದಿವಾಳಿಯಾಗಿದೆ ಎಂದು ಟೀಕಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಸತೀಶ್, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಮುಖಂಡರಾದ ನರಸೇಗೌಡ, ಮುದ್ದನಹಳ್ಳಿ ರಮೇಶ್, ಎಂ.ಎಸ್. ಯೋಗೇಶ್, ಪಾಪಣ್ಣ, ವೆಂಕಟೇಶ್, ಲೋಕನಾಥ್, ಚೌಡೇಗೌಡ, ಗೋವಿಂದೇಗೌಡ, ಮುತ್ತಿಗೆ ರಾಜೇಗೌಡ ಇತರರಿದ್ದರು.
0 Comments