ಅರಕಲಗೂಡು: ನಾಡಿನಾದ್ಯಂತ ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಸಿದ್ದಗಂಗಾ ಮಠ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ಕೆಸವತ್ತೂರು ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ನುಡಿದರು.
ತಾಲೂಕಿನ ಹೊಳಲಗೋಡು ಗ್ರಾಮದಲ್ಲಿ ಡಾ. ಶ್ರೀ ಶಿವಕುಮಾರ ಮಹಾ ಶಿವಯೋಗಿ ಗದ್ದುಗೆಗೆ ಮೂರನೇ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮಕ್ಕೆ ಭಕ್ತರನ್ನು ಆಹ್ವಾನಿಸುವ ಸಲುವಾಗಿ ಸಂಚರಿಸುತ್ತಿರುವ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಪ್ರಚಾರ ರಥಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದಗಂಗಾ ಮಠ ನಾಡಿನ ಹೆಸರಾಂತ ಮಠವಾಗಿದ್ದು, ಅಕ್ಷರ, ಅನ್ನದಾಸೋಹ ಮೂಲಕ ಲಕ್ಷಾಂತರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಇದು ಭಕ್ತರು ಮತ್ತು ಶ್ರೀಗಳ ಶ್ರಮದಿಂದ ಸಾಕಾರವಾಗಿದೆ ಎಂದು ತಿಳಿಸಿದರು.
ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ಮಾತನಾಡಿ, ಸಿದ್ದಗಂಗಾ ಮಠ ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದ ಬಡ ಮಕ್ಕಳಿಗೆ ಉಚಿತವಾಗಿ ಊಟ, ವಸತಿ ಜತೆಗೆ ವಿದ್ಯೆ ನೀಡಿದೆ. ಭಕ್ತರಿಗೆ ಉತ್ತಮ ಸಂಸ್ಕಾರ ನೀಡಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಕಾಕೋಡನಹಳ್ಳಿ ಮಂಜು, ಕುಮಾರಸ್ವಾಮಿ, ಕರ್ಪೂರವಳ್ಳಿ ನವೀನ, ಉಪಾಧ್ಯಕ್ಷ ಕೊಳ್ಳಂಗಿ ಚೇತನ, ಸೋಮ, ಮಲ್ಲಿಪಟ್ಟಣ ಪ್ರವೀಣ್, ಸ್ವಾಮಿಗೌಡ, ಮಲ್ಲಿಪಟ್ಟಣ ಮನು, ಸಚೀನ್, ಕಾರ್ತಿಕ್, ಪವನ್, ಜಯರಾಮ್, ಧರ್ಮ, ಮನೋಹರ್, ಗಣೇಶ್, ವಕೀಲ ವೇದಮೂರ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
0 Comments