ಅರಕಲಗೂಡು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಅರಸೀಕಟ್ಟೆ ಅಮ್ಮ ದೇವಸ್ಥಾನ ಹೆಸರಿನಲ್ಲಿ ನಿಯಮಬಾಹಿರವಾಗಿ ಸಮಿತಿ ರಚಿಸಿಕೊಂಡು ಹಣದ ವಸೂಲಿ ದಂದೆ ನಡೆಸಿ ಸಾರ್ವಜನಿಕರಿಗೆ ದ್ರೋಹ ಬಗೆಯುತ್ತಿರುವ ಅಕ್ರಮ ಜಾಲದ ವಿರುದ್ದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಮಾಜಿ ಸಚಿವ ಎ. ಮಂಜು ಆಗ್ರಹಿಸಿದರು.
ಅರಸೀಕಟ್ಟೆ ಅಮ್ಮ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಗ್ಗಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಸೇರಬೇಕಾದ ಅರಸೀಕಟ್ಟೆ ದೇವಸ್ಥಾನ ಕ್ಷೇತ್ರದ ಆದಾಯವನ್ನು ಅಕ್ರಮವಾಗಿ ಸಮಿತಿಯೊಂದನ್ನು ರಚಿಸಿಕೊಂಡು ಕೆಲವರು ಹಾಡಹಗಲೇ ಹಣದ ಸುಲಿಗೆ ಮಾಡಿ ದೇವತೆ ಹೆಸರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ತಾಲೂಕು ಆಡಳಿತದ ವೈಫಲ್ಯವೇ ಕಾರಣ. ಶಾಸಕ ಎ.ಟಿ. ರಾಮಸ್ವಾಮಿ ಸಮಿತಿಯಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಅಪರಾಧಿ ಸ್ಥಾನದಲ್ಲಿ ಪರಿಗಣಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಒತ್ತಾಯಿಸಿದರು.
ಅರಸೀಕಟ್ಟೆ ಕ್ಷೇತ್ರವು ಇದವರೆಗೆ ತಹಸೀಲ್ದಾರ್, ಸ್ಥಳೀಯ ಪಂಚಾಯಿತಿ ಆಡಳಿತದ ಹಿಡಿತದಲ್ಲಿತ್ತು. ಇಲ್ಲಿನ ಗೋಲಕವನ್ನು ರಕ್ಷಿಸುವ ಅಧಿಕಾರವು ಅವರಿಗೆ ಇದ್ದು, ಕ್ಷೇತ್ರಕ್ಕೆ ಶಾಸಕರು ಅಧ್ಯಕ್ಷರಾಗಿದ್ದು ತಹಶೀಲ್ದಾರ್ ಕಾರ್ಯದರ್ಶಿಯಾಗಿ ಕಂದಾಯ ನಿರೀಕ್ಷಕರು ಮತ್ತು ಹೆಗ್ಗಡಿಹಳ್ಳಿ, ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿಗಳ ಪಿಡಿಒ ಗಳು ಸದಸ್ಯರಾಗಿದ್ದು ಇಲ್ಲಿ ಬರುವಂತಹ ಆದಾಯವನ್ನು ಕ್ಷೇತ್ರದ ಅಭಿವೃದ್ದಿಗೆ ಬಳಸುವುದು ಹಿಂದಿನಿAದಲೂ ನಡೆದುಕೊಂಡು ಬಂದಿದೆ. ನಾನು ಮೂರು ಬಾರಿ ಶಾಸಕನಾದ ವೇಳೆ ಇದೇ ರೀತಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೆ. ಇದೀಗ ಕಳೆದ ಮೂರು ವರ್ಷಗಳಿಂದ ಸಮಿತಿಯೊಂದನ್ನು ರಚಿಸಿಕೊಂಡು ಕ್ಷೇತ್ರದಲ್ಲಿ ಬರುವ ಆದಾಯವನ್ನು ತಹಸೀಲ್ದಾರ್ ಅಥವಾ ಜಿಲ್ಲಾಡಳಿತಕ್ಕೂ ಲೆಕ್ಕ ಕೊಡದೆ ಇಲ್ಲಿನ ಆದಾಯವನ್ನು ಲಪಟಾಯಿಸಲಾಗುತ್ತಿದೆ. ಇದು ತಹಸೀಲ್ದಾರ್ ಮತ್ತು ಶಾಸಕರಿಗೆ ಗೊತ್ತಿಲ್ಲವೇ. ಈ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚಿತ ವಿಷಯವಾಗಿದೆ. ತಹಶೀಲ್ದಾರ್ ಅವರನ್ನು ಕೇಳಿದರೆ ಮೌನ ವಹಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕಾನೂನು ಬಾಹಿರವಾಗಿ ಸಮಿತಿಯನ್ನು ಮಾಡಿಕೊಂಡಿದ್ದು, ಶಾಸಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಶಾಸಕರಿಗೆ ಈ ವಿಷಯವು ಗೊತ್ತಿದ್ದೂ ಸುಮ್ಮನಿದ್ದರೆ ಅವರದು ಅಪರಾಧವಾಗುತ್ತದೆ ಎಂದು ಆಪಾದಿಸಿದರು.
ಹಂದಿ, ಕುರಿ, ಕೋಳಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಪ್ರಾಣಿ ಬಲಿಕೊಡುವವರ ಹಾಗೂ ಎಲ್ಲಾ ಅಂಗಡಿಗಳು ಅಡುಗೆ ಮನೆಗೆ ಅಧಿಕ ಬಾಡಿಗೆ ಪಡೆಯುವ ಮೂಲಕ ಹಣ ವಸೂಲಿ ಮಾಡಿಕೊಂಡು ದೇವರ ಹೆಸರಿನಲ್ಲಿ ಸಮಿತಿಯವರು ಹಣಮಾಡುವ ಲೂಟಿ ನಡೆಸುತ್ತಿದ್ದಾರೆ. ಸಮಿತಿ ಮಾಡಲು ಸರ್ಕಾರದಿಂದಾಗಲಿ, ಗ್ರಾಮ ಪಂಚಾಯಿತಿಯಿAದ, ತಾಲೂಕು ಆಡಳಿತದಿಂದ ಅನುಮತಿ ಪಡೆಯದೆ, ಸಮಿತಿಯ ಕುಟುಂಬದವರು ಹಣಮಾಡಿಕೊಳ್ಳುವ ಹುನ್ನಾರ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಆರೋಪಿಸಿದರು.
ಹಂದಿ ಅಂಗಡಿಗಳವರು ವರ್ಷಕ್ಕೆ 60 ಸಾವಿರ ರೂ ನೀಡಿ ಅನುಮತಿ ಪಡೆಯಬೇಕು ಎಂದು ಸಮಿತಿಯವರ ಬೇಡಿಕೆಗೆ ಹಂದಿ ಅಂಗಡಿ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ಅಂಗಡಿಗಳನ್ನು ಹರಾಜು ಮಾಡುವ ಅಧಿಕಾರ ಸಮಿತಿಗೆ ಇರುವುದಿಲ್ಲ. ಗ್ರಾಮ ಪಂಚಾಯಿತಿಗೂ ಸಹ ಲೈಸೆನ್ಸ್ ಕೊಡುವ ಅಧಿಕಾರವಿದ್ದು ಹರಾಜು ಮಾಡುವ ಅಧಿಕಾರವಿರುವುದಿಲ್ಲ. ಹೆಗ್ಗಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿಯವರು ಹಂದಿ ಅಂಗಡಿ ಮಾಲೀಕರಿಗೆ 60 ಸಾವಿರ ರೂ ಕಟ್ಟಿದರೆ ಲೈಸೆನ್ಸ್ ನೀಡುವುದಾಗಿ ನೋಟೀಸ್ ನೀಡಿದ್ದಾರೆ. ಇಲ್ಲಿ ವಾರಕ್ಕೆ ಮೂರು ದಿನ ಮಾತ್ರ ವ್ಯಾಪಾರ ನಡೆಯವುದರಿಂದ ಅಷ್ಟು ಹಣ ಕಟ್ಟುವುದು ಇವರಿಂದ ಸಾಧ್ಯವಿಲ್ಲ. ಪಂಚಾಯಿತಿಯವರು ಅಂಗಡಿ ಮಾಡಲಿಚ್ಚಿಸುವವರಿಗೆ 20 ಅಥವಾ 25 ಸಾವಿರ ರೂ ಪಡೆದು ಅವರಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಆಡಳಿತವು ಕೂಡಲೇ ಸಮಿತಿಯನ್ನು ವಶಪಡಿಸಿಕೊಂಡು ದೇವರ ಹೆಸರಿನಲ್ಲಿ ಹಣ ಮಾಡಿಕೊಳ್ಳುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹಂದಿ ಅಂಗಡಿಯ ಮಾಲೀಕ ಕುಮಾರ್ ಮಾತನಾಡಿ, ಸಮಿತಿಯನ್ನು ರಚನೆ ಮಾಡಿದಾಗ ಶಾಸಕರು ನಿಮಗೆ ಮನೆ, ಉಗ್ರಾಣ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ 60 ಸಾವಿರ ಕಟ್ಟಿ ಎಂದರು. ಕಳೆದ 2 ವರ್ಷದಿಂದ ಕಟ್ಟಿಕೊಂಡು ಬಂದಿದ್ದೇವೆ. ಅವರು ಹೇಳಿದಂತೆ ಸೌಲಭ್ಯಗಳನ್ನು ನೀಡಿಲ್ಲವಾದ್ದರಿಂದ ನಾವು ಈಗ ಹಣ ಕಟ್ಟುವುದಿಲ್ಲವೆಂದಾಗ ನೋಟಿಸ್ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ, ನೋಟಿ ಪ್ರತಿ ಪ್ರದರ್ಶಿಸಿದರು.
0 Comments