ಅರಕಲಗೂಡು: ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜಗೇರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ನೀಡಿದರು.
ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿ ಮಾತನಾಡಿದ ಅವರು ಆಸ್ಪತ್ರೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಅವರು ಸಚಿವರನ್ನು ಸ್ವಾಗತಿಸಿ ಮಾತನಾಡಿ, ಆಸ್ಪತ್ರೆ ಮೇಲ್ದರ್ಜಗೇರಿಸುವಂತೆ ಕಳೆದ ವರ್ಷ ಮನವಿ ನೀಡಲಾಗಿತ್ತು. ಎಪ್ಪತ್ತು ವರ್ಷಗಳ ಕಾಲದ ಆಸ್ಪತ್ರೆ ಕಟ್ಟಡ ತೀರ ಹಳೆಯದಾಗಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಹೋಬಳಿ ಕೇಂದ್ರದಲ್ಲಿರುವ ಆಸ್ಪತ್ರೆಗೆ ಅಗತ್ಯ ಚಿಕಿತ್ಸಾತ್ಮಕ ಸೌಲಭ್ಯಗಳು, ಸಿಬ್ಬಂದಿ ಕೊರತೆ ಇದೆ. ಆಸ್ಪತ್ರೆ ಕೊಠಡಿಗಳು, ಪ್ರಯೋಗಾಲಯಗಳು ಕಿಷ್ಕಿಂದೆಯಾಗಿ ಒಳ ರೋಗಿಗಳು ನಡೆದಾಡಲು ಕಿರಿಕಿರಿಯಾಗಿದೆ.
ಅರೆ ಮಲೆನಾಡು ಪ್ರದೇಶವಾದ ಹೋಬಳಿಯ ಹತ್ತಾರು ಹಳ್ಳಿಗಳ ಜನರು ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಅನಾರೋಗ್ಯಕ್ಕೀಡಾದ ಜನರು ಚಿಕಿತ್ಸೆಗಾಗಿ ದೂರದ ಅರಕಲಗೂಡು, ಹಾಸನಕ್ಕೆ ತೆರಳಬೇಕಿದೆ. ಆರೋಗ್ಯ ಕಾಪಾಡುವ ಉದ್ದೇಶದಿಂದ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಬಿಜೆಪಿ ಮುಖಂಡ ಎಚ್. ಯೋಗರಮೇಶ್ ಮಾತನಾಡಿ, ಆಸ್ಪತ್ರೆಯನ್ನುತುರ್ತಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ಮಾನಸ, ಗ್ರಾಪಂ ಸದಸ್ಯರಾದ ಯೋಗೇಶ್, ಚಂದ್ರೇಗೌಡ, ಪಿಡಿಒ ರಂಗಸ್ವಾಮಿ, ರಾಜಸ್ವ ನಿರೀಕ್ಷಕ ಶಶಿಧರ್, ಮುಖಂಡರಾದ ಎಂ.ಆರ್. ಮಂಜುನಾಥ್, ಲೋಕೇಶ್, ಹರೀಶ್, ಧರ್ಮಯ್ಯ ಇತರರಿದ್ದರು.
0 Comments