ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದ ಪ್ರಸಿದ್ಧ ಶ್ರೀ ಬಸವಣ್ಣ ಕಲ್ಲೇಶ್ವರಸ್ವಾಮಿ ದೇವರ ಉತ್ಸವ ಮಂಗಳವಾರ ಅತ್ಯಂತ ಸಡಗರ ಸಂಭ್ರಮಗಳಿಂದ ನೆರವೇರಿತು.
ಬೆಳಗಿನ ನಸುಕಿನಿಂದ ದಿನವಿಡೀ ನಡೆದ ದೇವರ ಉತ್ಸದಲ್ಲಿ ಅಪಾರ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ಮೂಲ ದೇವರಿಗೆ ಅಭಿಷೇಕ, ವಿವಿಧ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ಪೂರೈಸಲಾಯಿತು.
ಸಂಪ್ರದಾಯದಂತೆ ಗರ್ಭಗುಡಿ ಮುಂಭಾಗದ ಒಳಪ್ರಾಂಗಣದಲ್ಲಿ ಬಾಳೆ ಕಂದಿಲುಗಳ ಪೂಜಾ ಕಂಬಗಳನ್ನು ನಿರ್ಮಿಸಿ ನಡುಭಾಗದ ಕಿಂಡಿಯಲ್ಲಿ ದೇವರ ಮೂರ್ತಿಯನ್ನು ಹೊರಸಾಗಿಸಿ ಪ್ರದಕ್ಷಿಣೆ ಹಾಕಲಾಯಿತು. ನಂತರ ಅಲಂಕೃತ ಉತ್ಸವ ಅಡ್ಡೆ ಮೇಲೆ ಕೂರಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು.
ಭಕ್ತರು ಉತ್ಸವ ಅಡ್ಡೆ ಹೊತ್ತು ಮಂಗಳ ವಾದ್ಯಗೋಷ್ಠಿ ಮೆರವಣಿಯೊಂದಿಗೆ ಊರಿನಲ್ಲಿ ಎಲ್ಲ ಬೀದಿಗಳಲ್ಲಿ ಅದ್ದೂರಿ ಉತ್ಸವ ನಡೆಸಲಾಯಿತು. ಪ್ರತಿ ಮನೆಗಳ ಮುಂದೆ ಸಾಗಿದ ದೇವರ ಉತ್ಸವಕ್ಕೆ ಗ್ರಾಮಸ್ಥರು ಪ್ರತ್ಯೇಕವಾಗಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತಿ ಪರಾಕಾಷ್ಠೆ ಮೆರೆದರು.
ಉತ್ಸವ ಸಾಗುವ ಮಾರ್ಗದುದ್ದಕ್ಕೂ ದೇವರ ಅಡ್ಡೆ ಹೊತ್ತ ಭಕ್ತರು ಹಾಗೂ ಯುಕವರು, ಯುವತಿಯರು, ಮಕ್ಕಳು ಎನ್ನದೆ ಗ್ರಾಮಸ್ಥರು ಸುಗ್ಗಿ ಕುಣಿದು ಸಂಭ್ರಮಿಸಿದರು. ವೀರಗಾಸೆ ನೃತ್ಯ ಗಮನ ಸೆಳೆಯಿತು.
ಉತ್ಸವದ ಮುಗಿದ ನಂತರ ದೇವರ ಮೂರ್ತಿಯನ್ನು ಮೂಲ ಗರ್ಭಗುಡಿಗೆ ಸಾಗಿಸಲಾಯಿತು. ಗ್ರಾಮದ ಪ್ರತಿ ಮನೆಯ ಭಕ್ತರು ದೇವಸ್ಥಾನದಲ್ಲಿ ಹಣ್ಣು ತುಪ್ಪ ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದು ಭಕ್ತಿ ಭಾವ ಪ್ರದರ್ಶಿಸಿದರು. ಗ್ರಾಮಸ್ಥರಿಗೆ ಪ್ರಸಾದ ವಿನಿಯೋಗ ಹಾಗೂ ಸಾಮೂಹಿಕವಾಗಿ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು. ಕಳೆದೆರಡು ದಿನಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
0 Comments