ಅರಕಲಗೂಡು: ದೇಶದ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಗಳಿಸಿ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳವುದು ಅನಿವಾರ್ಯವಾಗಿದೆ ಎಂದು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಹೇಳಿದರು.
ಪಟ್ಟಣದ ಹಾಸನ ಪಿಯು ಕಾಲೇಜು ವತಿಯಿಂದ ಶಿಕ್ಷಕರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಫೇರ್ ವೆಲ್ ಪಾರ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉನ್ನತ ಸಾಧನೆಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಬಡವರು, ನೊಂದವರಿಗೆ ನೆರವು ನೀಡುವ ಮಾನವೀಯ ಮೌಲ್ಯಗಳನ್ನು ರೂಡಿಸಿ ಕೊಳ್ಳಬೇಕು. ಎಲ್ಲರೂ ವೈದ್ಯರು, ಇಂಜಿನಿಯರ್ ಗಳಾಗಬೇಂದಿಲ್ಲ. ಇತರೆ ಕ್ಷೇತ್ರಗಳಲ್ಲೂ ವಿಪುಲವಾದ ಅವಕಾಶಗಳಿದ್ದು ಇದರ ಉಪಯೋಗ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟಬೇಕು ಎಂಬ ಕನಸು ಕಟ್ಟಿಕೊಂಡು 10 ವರ್ಷಗಳ ಹಿಂದೆ ತೆರೆದ ಕಾಲೇಜು ಇದೀಗ ಸಕಲ ಸೌಕರ್ಯಗಳೊಂದಿಗೆ ಉತ್ತಮವಾಗಿ ಬೆಳೆದಿದೆ. ಜಿಲ್ಲೆಯಲ್ಲಿ ಅಲ್ಲದೆ ಪಕ್ಕದ ಜಿಲ್ಲೆಯೂ ಸೇರಿದಂತೆ 9 ಶಿಕ್ಷಣ ಸಂಸ್ಥೆಗಳನ್ನು ತರೆದು ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಜೋತು ಬೀಳದೆ ದೊಡ್ಡ ಕನಸುಗಳನ್ನು ಹೊತ್ತು ಅದರ ಸಾಕಾರಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಬಾಲರಾಜ್ ಮಾತನಾಡಿದರು. ಪ್ರಾಂಶುಪಾಲ ಪಿ. ನವೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಆಸ್ಪತ್ರೆ ತುರ್ತು ವಾಹನ ಚಾಲಕ ಪುಟ್ಟರಾಜ್, ಪ್ರಗತಿಪರ ಕೃಷಿಕ ನವಾಜ್ ಷರೀಪ್, ಬಿದರೂರು ಪ್ರೌಢಶಾಲೆ ಶಿಕ್ಷಕ ಸಿದ್ದಮಲ್ಲಪ್ಪ, ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎ.ಜಿ. ಅಜಿತ್ ಅವರನ್ನು ಗೌರವಿಸಲಾಯಿತು.
ಉಪನ್ಯಾಸಕರಾದ ಕೃಷ್ಣಮೂರ್ತಿ, ಮಧು ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.
0 Comments