ಅರಕಲಗೂಡು: ಪಟ್ಟಣದಲ್ಲಿ ಮಂಗಳವಾರ ಮಹಾ ಶಿವರಾತ್ರಿಯನ್ನು ಜನರು ಶ್ರದ್ದಾ ಭಕ್ತಿಗಳಿಂದ ಆಚರಿಸಿದರು.
ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳನ್ನು ನಡೆಸಲಾಯಿತು. ಜನರು ದೇವಾಲಯಗಳಿಗೆ ತೆರಳಿ ಶಿವನಿಗೆ ಬಿಲ್ವಪತ್ರೆ, ತುಂಬೆ ಹೂವುಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು. ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ,ಬಿಲ್ವಾರ್ಚನೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಸಲಾಯಿತು. ಮಧ್ಯಾಹ್ನ ಗಿರಿಜಾ ಕಲ್ಯಾಣ, ರಾತ್ರಿ ಉತ್ಸವ ಹಾಗೂ ರುದ್ರ ಪಾರಾಯಣದೊಂದಿಗೆ ನಾಲ್ಕು ಜಾವಗಳು ಶಿವನಿಗೆ ಅಭಿಷೇಕ ನಡೆಸಲಾಯಿತು. ಜನರು ಸಾನೂಹಿಕ ಭಜನೆ, ಗೀತಗಾಯನಗಳ ಮೂಲಕ ಜಾಗರಣೆ ನಡೆಸಿದರು.
ಸಮೀಪದ ಶಂಭುನಾಥಪುರದ ಐತಿಹಾಸಿಕ ಸ್ವಯಂಭುನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಪಾರ್ವತಮ್ಮ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನಡೆಸಲಾಯಿತು. ಋತ್ವಿಜರು ರುದ್ರಪಠಣ ನಡೆಸಿದರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗಗಳು ನಡೆದವು.
ಪೇಟೆ ನಂಜುಂಡೇಶ್ವರ ದೇವಾಲಯ,ವೀರಭದ್ರೇಶ್ವರ ದೇವಾಲಯ, ಕೆಇಬಿ ರಸ್ತೆ ಶಕ್ತಿ ಗಣಪತಿ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಜಾಗರಣೆಗಳು ನಡೆದವು. ಭಕ್ತರು ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
0 Comments