ಅರಕಲಗೂಡು: ಜಾತ್ಯಾತೀತದ ಮುಖವಾಡ ಧರಿಸಿ ಕಾಂಗ್ರೆಸ್ ಪಕ್ಷ ಜನ ವಿರೋಧಿಯಾಗಿ ವರ್ತಿಸುತ್ತಾ ಕೋಮು ಸೌರ್ಹಾದತೆ ಕದಡುತ್ತಿದೆ ಎಂದು ಮುಖಂಡ ಹೆಚ್. ಯೋಗರಮೇಶ್ ಕಿಡಿಕಾರಿದರು.
ಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿ, ಮತಕ್ಕಾಗಿ ಅಲ್ಪ ಸಂಖ್ಯಾತರನ್ನು ಓಲೈಸುತ್ತಿರುವ ಕಾಂಗ್ರೆಸ್ ಪಕ್ಷ ಕಳೆದ ಎಪ್ಪತ್ತು ವರ್ಷಗಳಿಂದ ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಮಾಡಲಿಲ್ಲ. ಕಾಶ್ಮೀರ ಗಡಿ ಭೂ ಭಾಗದ ಅಪಾರ ಜಾಗವನ್ನು ಪಾಕಿಸ್ತಾನ, ಚೀನಾ ಅತಿಕ್ರಮಣ ಮಾಡಲು ಕಾಂಗ್ರೆಸ್ ಪಕ್ಷದ ದುರಾಡಳಿತವೇ ಕಾರಣವಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ವರ್ಚಸ್ಸು ವಿದೇಶದಲ್ಲೆಲ್ಲ ವೃದ್ಧಿಸಿದೆ. ಕಾಂಗ್ರೆಸ್ ಪಕ್ಷದ ಆಡಳಿತವನ್ನು ಕಂಡಿರುವ ಜನರು ಚುನಾವಣೆಯಲ್ಲಿ ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ರಾಜಕೀಯವಾಗಿ ದೇಶದಲ್ಲೇ ಕಾಂಗ್ರೆಸ್ ಮುಳುಗುವ ಹಡಗು ಎಂದು ಟೀಕಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮೇಕೆದಾಟು ನೀರಾವರಿ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಮತಕ್ಕಾಗಿ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ. ಹಿಜಾಬ್ ಪ್ರಕರಣ ಮುಂದಿಟ್ಟು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಗೀಡಾದರೂ ಕಾಂಗ್ರೆಸ್ ಜಾತಿ ಸಂಘರ್ಷ ಹುಟ್ಟುಹಾಕಿ ಕೋಮುಭಾವನೆ ಕೆರಳಿಸುತ್ತಿದೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ವಿರೋಧ ಪಕ್ಷವಾಗಿ ಜವಾಬ್ದಾರಿ ನಿರ್ವಹಿಸದೆ ಅಧಿವೇಶನಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿ ಜನ ವಿರೋಧಿಯಾಗಿ ವರ್ತಿಸುತ್ತಿರುವುದು ಖಂಡನಾರ್ಹ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿಗಳ ಅರಿವು ಜನರಿಗಿದೆ. ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಜನರು ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದು ನಿಶ್ಚಿತ ಎಂದರು.
ಮುಖಂಡರಾದ ವಿಶ್ವನಾಥ್, ಕೇಶವೇಗೌಡ, ಲೋಕೇಶ್, ಶಿವಲಿಂಗಶಾಸ್ತ್ರಿ, ಗ್ಯಾಸ್ ಚಂದು, ಗುರು, ಮೋಹನ್, ಕಾಳೇನಹಳ್ಳಿ ಸೂರ್ಯ, ರಾಜೀವ್, ಸ್ವಾಮಿಗೌಡ, ವಿಜಯಕುಮಾರ್, ಪ್ರದೀಪ್ ಇತರರು ಪಾಲ್ಗೊಂಡಿದ್ದರು.
0 Comments