ಅರಕಲಗೂಡು: ತಾಲೂಕಿನ ಇತಿಹಾಸ ಪ್ರಸಿದ್ಧ ದಾಸನಪುರ- ಮಣಜೂರು ಗ್ರಾಮದ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಶನಿವಾರ ಸಡಗರ, ಸಂಭ್ರಮಗಳಿಂದ ನೆರವೇರಿತು.
ದೇವಸ್ಥಾನದ ಬೆಟ್ಟದ ಮೇಲೆ ಭಕ್ತರ ಜಾತ್ರೆಯೇ ನೆರೆದಿತ್ತು. ಸುತ್ತಮುತ್ತಲಿನ ಹಳ್ಳಿಗಳ ಅಪಾರ ಗ್ರಾಮಸ್ಥರು ಬೆಟ್ಟದ ಮೆಟ್ಟಿಲುಗಳನ್ನು ಏರಿ ಜಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವರಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆದವು. ನಂತರ ದೇವರ ಉತ್ಸವ ನಡೆಸಲಾಯಿತು.
ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರ ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅಪಾರ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.
ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಗ್ರಾಪಂ ಸದಸ್ಯ ನೆಲಬಳ್ಳಿ ಪ್ರಕಾಶ್, ದಾನಿ ಅಧಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜ್ಯೋತಿ ಸುರೇಶ್ ಸೇರಿದಂತೆ ಅನೇಕ ಗಣ್ಯರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
0 Comments