ಅರಕಲಗೂಡು: ಕಾಯಕನಿಷ್ಠೆಯೇ ಮಡಿವಾಳ ಸಮಾಜದ ಉಸಿರು. ಮನುಕುಲದ ಉದ್ದಾರಕ್ಕೆ ಶ್ರಮಿಸಿದ ಮಡಿವಾಳ ಮಾಚಿದೇವರ ಬದುಕಿನ ಮೌಲ್ಯಗಳು, ತತ್ವಾದರ್ಶಗಳನ್ನು ಎಲ್ಲರ ಜೀವನದಲ್ಲೂ ಅಳವಡಿಕೆಯಾಗಬೇಕು ಎಂದು ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಉಳ್ಳವರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಶೋಷಿತ ಸಮಾಜದ ಜನರನ್ನು ಮೇಲೆತ್ತಲು ಶ್ರಮಿಸಿದ ಮಹಾನ್ ಚೇತರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಇವರ ಆದರ್ಶ ಗುಣಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿಯೇ ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂದಿದ್ದ ಮಾಚಿದೇವರು ಸಮಾಜದ ಜನರ ಕಾಯಕ ನಿಷ್ಢೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಬಟ್ಟೆ ತೊಳೆದು ಅಸ್ಪೃಶ್ಯತೆ ಕಾಯಕ ಮಾಡುತ್ತಿದ್ದ ನಮ್ಮ ಸಮಾಜದವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಸರ್ಕಾರ ಕ್ಕೆ ಹಲವು ಸಲ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಸರ್ಕಾರ ಇನ್ನದರೂ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಶಶಿಧರ್, ಶಿವಕುಮಾರ್, ಮಂಜುನಾಥ್, ಕೇಶವ, ಮೋಹನ್, ರಮೇಶ್, ನಾಗಣ್ಣ, ಸೋಮಣ್ಣ, ಶಿರಸ್ತೇದಾರ್ ನಂಜೇಗೌಡ, ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್ ಇತರರಿದ್ದರು.
0 Comments