ಇಹ ಲೋಕ ಯಾತ್ರೆ ಮುಗಿಸಿ ಮಣ್ಣಲ್ಲಿ ಮಣ್ಣಾದ ಕಲಾವಿದ ರಾಮಯ್ಯ

ಅರಕಲಗೂಡು: ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದ ತಾಲೂಕಿನ ಹೊನ್ನವಳ್ಳಿ ಗ್ರಾಮದ ಕೀಲು ಕುದುರೆ ಕುಣಿತ ಕಲಾವಿದ ಎಚ್.ಎನ್. ರಾಮಯ್ಯ (90) ಸೋಮವಾರ ನಿಧನರಾದರು. ಮಂಗಳವಾರ ಮೃತರ ಅಂತ್ಯಕ್ರಿಯೆ ನೆರವೇರಿತು.

ಕಳೆದ ಕೆಲವು ದಿನಗಳಿಂದ ವಯೋ ಸಹಜ ಆನಾರೋಗ್ಯದಿಂದ ಬಳಲುತ್ತಿದ್ದರು. ಇವರಿಗೆ ಪತ್ನಿ ಜಯ ಲಕ್ಷಮ್ಮ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. 

ಕೀಲು ಕುದುರೆ ರಾಮಯ್ಯ ಎಂದೇ ಪ್ರಸಿದ್ದರಾಗಿದ್ದ ಇವರು ನಾಡಿನಾದ್ಯಂತ ವಿವಿಧ ಹಾಸ್ಯ ಕಲಾ ಪ್ರಾಕಾರಗಳ ನೃತ್ಯ ಪ್ರದರ್ಶಿಸಿ ಸಾವಿರಾರು ಕಲಾ ರಸಿಕರ ಮನ ರಂಜಿಸಿ ಜಾನಪದ ಲೋಕಕ್ಕೆ ಮಹತ್ತರವಾದ ಸೇವೆ ಸಲ್ಲಿಸಿದ್ದರು.
ಕೀಲು ಕುದುರೆ ಕಲಾವಿದರಾಗಿ ರಾಜ್ಯದಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ್ದರು. 90ನೇ ಇಳಿ ವಯಸ್ಸಿನ ಮುಪ್ಪಿನಲ್ಲಿ ಸರ್ಕಾರ ಇವರ 65 ವರ್ಷಗಳ ಕಾಲದ ಕೀಲು ಕುದುರೆ ನೃತ್ಯ ಪ್ರದರ್ಶನದ ಮಹೊನ್ನತ ಕೊಡುಗೆ ಪರಿಗಣಿಸಿ 2021 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಿಸಿತ್ತು. ಆದರೆ ಪ್ರಶಸ್ತಿ ಸ್ವೀಕಾರಕ್ಕೆ ಮುನ್ನವೆ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಇದರೊಂದಿಗೆ ಜಾನಪದ ಕಲಾ ಲೋಕದ ಹಿರಿಯ ಕೊಂಡಿಯೊAದು ಕಳಚಿದೆ.

ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ವಯಸ್ಸಾದ ಕಾರಣಕ್ಕಾಗಿ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರೊಂದಿಗೆ ತಾಲೂಕು ಜಾನಪದ ಅಕಾಡೆಮಿ ಅಧ್ಯಕ್ಷ ದೇವಾನಂದ ವರ ಪ್ರಸಾದ್ ಅವರು ಮಾತುಕತೆ ನಡೆಸಿ ರಾಮಯ್ಯ ಅವರ ಹೊನ್ನವಳ್ಳಿ ನಿವಾಸಕ್ಕೇ ಬಂದು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲು ತೀರ್ಮಾನಿಸಲಾಗಿತ್ತು. ವಿಧಿಯಾಟದಿ ಪ್ರಶಸ್ತಿ ಭಾಗ್ಯ ಕಣ್ತುಂಬಿಕೊಳ್ಳುವ ಮುಂಚೆಯೇ ಕಣ್ಮುಚ್ಚಿದ್ದಾರೆ.
ಎಚ್.ಎನ್. ರಾಮಯ್ಯ ಅವರು ನಾಲ್ವರು ಮಕ್ಕಳಾದ ಯಶೋದಮ್ಮ, ಯಾದವ,ಜಲಜಾಕ್ಷಿ, ದಿವಾಕರ ಮತ್ತು ಮಡದಿ ಜಯಲಕ್ಷ್ಮಮ್ಮ ಹಾಗೂ ಮೊಮ್ಮಕ್ಕಳನ್ನು ಅಗಲಿ ಇಹಲೋಕ ತ್ಯಜಿಸಿದ್ದಾರೆ. ಪುತ್ರ ದಿವಾಕರ್ ತನ್ನ ತಂದೆ ರಾಮಯ್ಯ ಅವರು ಕೀಲು ಕುದುರೆ ನೃತ್ಯ ತಂಡ ಮುನ್ನಡೆಸುತ್ತಿದ್ದಾರೆ.

ಜಾನಪದ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ರಾಮಯ್ಯ ಅವರ ನಿಧನದಿಂದ ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಮAಗಳವಾರ ಬೆಳಗ್ಗೆ ಹೊನ್ನವಳ್ಳಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

Post a Comment

0 Comments