ಅರಕಲಗೂಡು: ಮನುಷ್ಯ ದುರಹಂಕಾರದ ಭಾವನೆಗಳನ್ನು ತೊರೆದು ದುಷ್ಚಟಗಳಿಂದ ದೂರವುಳಿಯುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರಷ್ಟೆ ಎಲ್ಲ ಕ್ಷೇತ್ರಗಳಲ್ಲೂ ಏಳಿಗೆ ಹೊಂದಬಹುದು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ ಸಲಹೆ ನೀಡಿದರು.
ಹಳ್ಳಿಮೈಸೂರು ಹೋಬಳಿಯ ಹೊಸಲಕ್ಕೇಗೌಡನ ಕೊಪ್ಪಲು ಗ್ರಾಮದಲ್ಲಿ ಸೋಮವಾರ ಸಂಜೆ ರಾಜಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯ ತಲೆಮಾರಿನ ಸಮುದಾಯದ ಜನ ಅನಕ್ಷರಸ್ಥರಾದರೂ ಪೌರಾಣಿಕ ನಾಟಕಗಳ ಕಲಿಕೆಯಲ್ಲಿ ಅನನ್ಯ ಪ್ರೌಢಿಮೆ ಪ್ರದರ್ಶಿಸಿ ಉತ್ತಮ ಜೀವನ ಸಾಗಿಸುವ ಮುಖೇನೆ ನಮ್ಮ ಸಂಸ್ಕೃತಿಯ ಉನ್ನತಿಗೆ ಮಹತ್ವದ ಸೇವೆ ನೀಡಿದ್ದರು. ಇಂದಿನ ತಲೆಮಾರಿನಲ್ಲಿ ದುಷ್ಚಟಗಳಿಗೆ ಮಾರುಹೋಗಿ ಸಾಮಾಜಿಕ ವಾತಾವರಣ ಕಲುಷಿತವಾಗಿ ಸುಸಂಸ್ಕೃತಿ ಕಣ್ಮರೆಯಾಗುತ್ತಿರುವುದು ವಿಷಾದನೀಯ. ಪೌರಾಣಿಕ ನಾಟಕಗಳಿಂದ ಉತ್ತಮ ಸಂಸ್ಕೃತಿ, ಸದಾಚಾರಗಳನ್ನು ಮೈಗೂಡಿಸಿಕೊಂಡು ಸತ್ಯ ಪರಿಪಾಲನೆ ಹಾದಿಯಲ್ಲಿ ಸಾಗಬೇಕಿದೆ ಎಂದರು.
ಹೊಳೆರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಿಕೊಪ್ಪಲು ಮಂಜೇಗೌಡ ಮಾತನಾಡಿ, ರಾಜಕೀಯವಾಗಿ ಹೋಬಳಿ ಜನತೆ ಜಾಗೃತರಾಗದ ಕಾರಣ ಮೂಲಭೂತ ಸೌಕರ್ಯಗಳಿಲ್ಲದೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತಾಗಿದೆ. ಸಮಾಜದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸುತ್ತಿರುವ ಪುಟ್ಟಸ್ವಾಮಿ ಅವರಿಗೆ ರಾಜಕೀಯ ಅಧಿಕಾರ ನೀಡಿ ಅವರ ಋಣ ತೀರಿಸಬೇಕಿದೆ ಎಂದರು.
ಮುಖಂಡರಾದ ಅಣ್ಣೇಗೌಡ, ಯೋಗೇಶ್, ರಾಮೇಗೌಡ, ಶಂಬೇಗೌಡ, ತಿಪ್ಪೇಶ್, ಲಕ್ಕೇಗೌಡ, ಸುಬ್ಬೇಗೌಡ, ಸ್ವಾಮೀಗೌಡ, ಕೆಂಪಣ್ಣ, ತಿಮ್ಮೇಗೌಡ, ಪರಮೇಶ್, ನಾಗರಾಜ್, ಕುಮಾರ, ಶಿವಣ್ಣ, ಅಂಜನಿಗೌಡ, ನಿಂಗೇಗೌಡ, ಮಂಜು, ಸುರೇಶ್, ಕರಿಯಣ್ಣ, ವಕೀಲ ಶ್ರೀಧರ್, ರಾಜೇಗೌಡ, ಮಧು, ಜಯರಾಂ, ದಾಸೇಗೌಡ ಹಾಗೂ ಗ್ರಾಮಸ್ಥರು ಇದ್ದರು.
0 Comments