ಅರಕಲಗೂಡು: ತಾಲೂಕಿನ ತರಿಗಳಲೆ ಭಾಗದಲ್ಲಿ ಕಾಡಾನೆಗಳ ದಾಳಿಗೆ ರೈತರು ಬೆಳೆದ ಬೆಳೆಗಳು ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ.
ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ರೈತರು ಬೆಳೆದ ಬೆಳೆಗಳನ್ನು ತಿಂದು ತುಳಿದು ನಾಶಪಡಿಸುತ್ತಿವೆ.
ಶುಕ್ರವಾರ ರಾತ್ರಿ ತರಿಗಳೆ ಗ್ರಾಮದ ಬಳಿ ದಾಳಿ ನಡೆಸಿರುವ ಏಳೆಂಟು ಕಾಡಾನೆಗಳು ಹುಲುಸಾಗಿ ಬೆಳೆದಿದ್ದ ಗೆಣಸು ಫಸಲು ಹಾಳುಗೆಡವಿವೆ.
ಕೊಡಗಿನ ಗಡಿ ಭಾಗದಿಂದ ತಾಲೂಕಿನ ಮಲೆನಾಡು ಪ್ರದೇಶದ ಬೆಳೆಗಳಗ ಜಮೀನಿನತ್ತ ನುಗ್ಗುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು ರೋಸಿ ಹೋಗಿದ್ದಾರೆ.
ಬೆಳೆದಿದ್ದ ಮುಸುಕಿನ ಜೋಳದ ಬೆಳೆ ತುಳಿದು ಹಾಳು ಮಾಡಿದ್ದ ಕಾಡಾನೆಗಳು ಇದೀಗ ಎರಡು ಎಕರೆಯಲ್ಲಿ ಕಟಾವಿಗೆ ಬಂದಿದ್ದ ಗೆಣಸು ಫಸಲು ನಾಶಪಡಿಸಿವೆ. ಬೆಳೆ ಜಮೀನಿಗೆ ನೀರು ಹಾಯಿಸಲು ಅಳವಡಿಸಿದ್ದ ಪಂಪ್‌ಸೆಟ್ ಪೈಪುಗಳನ್ನು ತುಳಿದು ಹಾನಿಪಡಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಉಪಟಳ ನಿಯಂತ್ರಿಸಬೇಕು. ಹಾನಿಯಾದ ಬೆಳೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ದಿನೇಶ್ ಅವಲತ್ತುಕೊಂಡಿದ್ದಾರೆ.
ಮಳೆಗಾಲವಾದ ಪರಿಣಾಮ ಸೋಲಾರ್ ಬೇಲಿ ಮುರಿದು ಕೊಡಗಿನ ಗಡಿ ಭಾಗದ ನಿಡ್ತ ಅರಣ್ಯ ಪ್ರದೇಶದಿಂದ ಕಾಡಾನೆಗಳು ಇತ್ತ ದಾಳಿ ನಡೆಸುತ್ತಿವೆ. ಸೋಲಾರ್ ಬೇಲಿ ಸರಿಪಡಿಸಿ ಆನೆಗಳನ್ನು ಓಡಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಬೆಳೆ ಕಳೆದುಕೊಂಡ ರೈತರು ದಾಖಲೆಗಳನ್ನು ನೀಡಿದರೆ ಪರಿಹಾರ ಒದಗಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್ ತಿಳಿಸಿದರು.
0 Comments