ಸೌಲಭ್ಯಗಳಿಲ್ಲದ ಹಾಸ್ಟೆಲ್ ನಲ್ಲಿ ೧೨ ವರ್ಷ ಕಳೆದ ವಿದ್ಯಾರ್ಥಿಗಳು!!

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಅವರ ಮುಂದೆ ನಿಲಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನೆ ಬಿಚ್ಚಿಟ್ಟರು.

ಕಳೆದ ಎರಡು ವರ್ಷಗಳ ಹಿಂದೆ ಗಾಂಧಿ ಜಯಂತಿಯಂದು ಶಾಸಕ ಎ.ಟಿ. ರಾಮಸ್ವಾಮಿ ಅವರು ಗ್ರಾಮ ವಾಸ್ತವ್ಯ ಹೂಡಿದ್ದ ಹಾಸ್ಟಲ್ ಗೆ ಇಂದು 
ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಅವರು ಸದಸ್ಯರಾದ ಸುಮಿತ್ರ, ವೇದ, ನಾಗರಾಜು ಅವರೊಂದಿಗೆ ಭೇಟಿ ಇತ್ತ ವೇಳೆ ಅವ್ಯವಸ್ಥೆ ಅನಾವರಣಗೊಂಡಿತು.

ಸ್ವಚ್ಚತರಯಿಲ್ಲದೆ ಗಬ್ಬೆದ್ದು ದುರ್ನಾತ ಬೀಡುತ್ತಿರುವ ಕಚ್ಚಾ ಶೌಚಾಲಯಗಳು ಅಸಹ್ಯಕರವಾಗಿದ್ದು ಅನೈರ್ಮಲ್ಯದ ತಾಣವಾಗಿದ್ದು ಪಕ್ಕದ ಕೊಠಡಿಗಳಲ್ಲಿ ಮಕ್ಕಳು ತರಗತಿಯಲ್ಲಿ ಕುಳಿತು ಪಾಠ ಕೇಳುವ ದುಸ್ಥಿತಿಯನ್ನು ಕಂಡು ಅಧ್ಯಕ್ಷರ ಅಸಮಧಾನ ಹೊರ ಹಾಕಿದರು.
ತರಗತಿಗೆ ತೆರಳಿದ ಸಂದರ್ಭ ಬೆಂಚುಗಳಿಲ್ಲದೆ ಕೆಲ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದುದು ಕಂಡುಬಂತು, ಇದನ್ನು ಪ್ರಶ್ನಿಸಿದ ಪ್ರಾಂಶುಪಾಲೆ ಶೃತಿ ಅವರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಬೆಂಚುಗಳ ಕೊರತೆಯಾಗಿದೆ ಎಂದು ಉತ್ತರಿಸಿದರು.

ಹಾಸ್ಟಲ್ ನಲ್ಲಿ ಒಳ್ಳೆ ಊಟ, ತಿಂಡಿ ನೀಡಲಾಗುತ್ತಿದೆ. ಸ್ನಾನಕ್ಕರ ಮಾತ್ರ ಬಿಸಿ ನೀರಿನ ಸೌಲಭ್ಯವಿಲ್ಲದೇ ತಣ್ಣೀರು ಬಳಸಬೇಕಾಗಿದೆ. ಸೌದೆ ಗಳಿಲ್ಲದೆ ಮಳೆಗೆ ಹಸಿ ಸೌದೆಗಳು ಉರಿಯುತ್ತಿಲ್ಲ, ಕೆಲವೊಮ್ಮೆ ಬಿಸಿಲಿನಲ್ಲಿ ಕಾಯಿಸಿದ ನೀರಲ್ಲಿ ಸ್ನಾನ ಮಾಡುತ್ತಿರುವುದಾಗಿ ವಿದ್ಯಾರ್ಥಿಗಳು ಸಮಸ್ಯೆಯ ಭೀಕರತೆ ಬಿಚ್ಚಿಟ್ಟರು.

ಈ ಕುರಿತು ಪ್ರಾಂಶುಪಾಲರನ್ನು ಕೇಳಿದಾಗ, ಇಲ್ಲಿ ಬಿಸಿ ನೀರಿನ ವ್ಯವಸ್ಥೆ ಸರಿಯಿಲ್ಲ. ಪಕ್ಕದ ಕಾಲೇಜು ಕಟ್ಟಡದ ಮೇಲೆ ಸೋಲಾರ್ ಅಳವಡಿಸಿದ್ದು ನೀರು ಮೇಲೆ ಹತ್ತದೆ ಮಕ್ಕಳಿಗೆ ಬಿಸಿ ನೀರು ಸ್ನಾನಕ್ಕೆ ತೊಂದರೆಯಾಗಿದೆ. ವಿದ್ಯುತ್ ಬಿಲ್ ಹೆಚ್ಚಿರುವುದಾಗಿ ಕಾಲೇಜಿನವರು ಸ್ಪಂದಿಸುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಸ್ಥಳದಲ್ಲೇ ಹಾಜರಿದ್ದ ಪಿಡಿಒ ರಂಗಸ್ವಾಮಿ ಮಾತನಾಡಿ, ಹಾಸ್ಟೆಲ್ ಕಟ್ಟೆದ ಬಾಡಿಗೆದಾರರು ನೀರು ಬಿಲ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹಾಸ್ಟೆಲ್ ನೀರು ಸರಬರಾಜು ಬೇಡವೆಂದು ಅರ್ಜಿ ಸಲ್ಲಿಸಿದ್ದಾರೆ. ಆದರೂ ಮಕ್ಕಳ ಹಿತ‌ದೃಷ್ಟಿಯಿಂದ ನೀರು ನೀಡಲು ಕ್ರಮ ವಹಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿರುವ ಹಾಸ್ಟಲ್ ನಲ್ಲಿ ನಿಲಯಾರ್ಥಿಗಳಿಗೆ ಸಮರ್ಪಕವಾಗಿ ಸೌಲಭ್ಯಗಳಿಲ್ಲ. ಶೀಟಿನ ಮೇಲ್ಚಾವಣಿ ಹೊದಿಸಿರುವ ಕೊಠಡಿಗಳಲ್ಲಿ ಕುಳಿತು ಮಕ್ಕಳು ಪಾಠ ಕೇಳುವಂತಾಗಿದೆ. ಶೌಚಾಲಯದೊಳಗೆ ಕಾಲಿಟ್ಟರೆ ಮೂಗು ಮುಚ್ಚಿಕೊಂಡು ಹೋಗಲು ಸಾಧ್ಯವಾಗದಷ್ಟು ಮಟ್ಟಿಗೆ ಗಬ್ಬೆದ್ದಿದೆ. ಈ ಬಾರಿ 153 ಮಕ್ಕಳು ಕಲಿಯುತ್ತಿದ್ದು ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಅಧಿಕ ಬಾಡಿಗೆ ವಸೂಲಿ ಮಾಡುವ ಬಾಡಿಗೆದಾರರು ಕೂಡ ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಒದಗಿಸಲು ಮುಂದಾಗಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

Post a Comment

0 Comments