ಅರಕಲಗೂಡು: ಮೈಸೂರು ದಸಾರಾ ಉತ್ಸವದ ಸಂಗಡವೆ ಪಟ್ಟಣದ ದಸರಾ ಉತ್ಸವಕ್ಕೆ ಅನುದಾನ ನೀಡಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಪಟ್ಟಣದ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಗುರುವಾರ ರಾತ್ರಿ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ದಸರಾ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡತ್ತಾ ಬಂದಿದೆ. ಪ್ರತಿ ವರ್ಷ ಅನುದಾನಕ್ಕೆ ಮನವಿ ಸಲ್ಲಿಸುವ ಬದಲು ಮೈಸೂರು ದಸರಾಕ್ಕೆ ಅನುದಾನ ನೀಡುವ ಸಮಯದಲ್ಲೆ ಇಲ್ಲಿಗೂ ಅನುದಾನ ನೀಡುವಂತೆ ಮಾಡಿದ ಮನವಿಯನ್ನು ಸರ್ಕಾರ ಪುರಸ್ಕರಿಸಿದ್ದುಅದರಂತೆ ಹಣ ಬಿಡುಗಡೆಯಾಗಲಿದೆ ಎಂದರು .
ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷವೂ ಸರಳ ದಸರಾ ಆಚರಣೆ ನಡೆಯಲಿದೆ. ಆಯುಧ ಪೂಜೆಯಂದು ಪಪಂ ಕಚೇರಿ ಆವರಣದಲ್ಲಿ ಸರ್ಕಾರಿ ಇಲಾಖೆಗಳ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಲಿದೆ. ವಿಜಯ ದಶಮಿಯಂದು ಉತ್ಸವಗಳು ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ತೆರಳುವ ಕಾರ್ಯ ನಡೆಯಲಿದೆ ಎಂದರು.
ಅರೇ ಮಾದನಹಳ್ಳಿ ವಿಶ್ವಕರ್ಮ ಮಠದ ಶಿವ ಸುಜ್ಞಾನ ಮೂರ್ತಿ ಸ್ವಾಮೀಜಿ, ದೊಡ್ಡಮಠದ ಮಲ್ಲಿ ಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಮಠಾಧೀಶ ಹಾಗೂ ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಾನುವಾರುಗಳ ಕಾಲು ಬಾಯಿ ರೋಗದ ಕುರಿತು ಹೈನುಗಾರರಿಗೆ ಅರಿವು ಮೂಡಿಸಲು ಏಕತಾರಿ ಸಾಂಸ್ಕೃತಿಕ ಸಂಘಟನೆಯ ದೇವಾನಂದ ವರ ಪ್ರಸಾದ್ ಮತ್ತು ಸಂಗಡಿಗರು ಹೊರತಂದಿರುವ ಗೀತಗಾಯನದ ಸಿಡಿಯನ್ನುಬಿಡುಗಡೆ ಗೊಳಿಸಲಾಯಿತು. 67 ನೇ ವನ್ಯ ಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಅಡುಗೆ ಅನಿಲ ಯೋಜನೆಯ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಪಪಂ ಅಧ್ಯಕ್ಷ ಹೂವಣ್ಣ, ಸದಸ್ಯರಾದ ಕೃಷ್ಣಯ್ಯ, ಸುಬಾನ್ ಷರೀಪ್, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ತಾಪಂ ಇಒ ಎನ್.ರವಿಕುಮಾರ್, ವಲಯ ಅರಣ್ಯಾಧಿಕಾರಿ ಅರುಣ್, ಬಿಇಒ ಮನಮೋಹನ್, ಪಪಂ ಮುಖ್ಯಾಧಿಕಾರಿ ಶಿವಕುಮಾರ್, ಸಿಪಿಐ ಸತ್ಯ ನಾರಾಯಣ, ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್.ರಾಮಸ್ವಾಮಿ, ದಸರಾ ಉತ್ಸವ ಸಮಿತಿಯ ಶಶಿಕುಮಾರ್, ರವಿಕುಮಾರ್ ಇದ್ದರು.
0 Comments