ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆಗಳಿಗೆ ಭೂಮಿಪೂಜೆ ಸಲ್ಲಿಸಿದ ಪ್ರಜ್ವಲ್ ರೇವಣ್ಣ, ರಾಮಸ್ವಾಮಿ

ಅರಕಲಗೂಡು: ತಾಲ್ಲೂಕಿನ ಬೈಚನಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ  ರಸ್ತೆ  ಅಭಿವೃದ್ಧಿ ಕಾಮಗಾರಿಗೆ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ  ಭೂಮಿ ಪೂಜೆ ನೆರವೇರಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲ್ಲೂಕಿನ  ಗಂಜಲಗೂಡಿನಿಂದ ಮುದ್ದನಹಳ್ಳಿ, ಕೇಶವಪುರ ಮಾರ್ಗ  ಬೈಚನಹಳ್ಳಿ ಗೆ ಸೇರುವ ಈ ರಸ್ತೆಯಯನ್ನು ರೂ 3.34 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಳೆದ 20 ವರ್ಷಗಳಿಂದ ಅಭಿವೃದ್ದಿ ಕಾಣದ ಈ ರಸ್ತೆಯನ್ನು ಗುರುತಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. 

ಗ್ರಾಮೀಣ ರಸ್ತೆಗಳ  ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾಮಗಾರಿಯ  ಗುಣಮಟ್ಟ  ಕುರಿತು ರಾಜಿಯ ಪ್ರಶ್ನೆ ಇಲ್ಲ, ಕಳಪೆ ಕಾಮಗಾರಿ ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ.ಗುಣಮಟ್ಟ ನೋಡಿಕೊಳ್ಳುವಲ್ಲಿ ಸ್ಥಳಿಯ ಜನರ ಜವಾಬ್ದಾರಿಯೂ ಇದೆ, ಪ್ರತಿನಿತ್ಯ ಸಂಚಾರ ನಡೆಸುವ ಜನರು ಉತ್ತಮ ರಸ್ತೆ ನಿರ್ಮಾಣದ ಕುರಿತು ಆಸಕ್ತಿ ವಹಿಸಬೇಕು ಎಂದರು. 

ಶಾಸಕ  ಎ.ಟಿ.ರಾಮಸ್ವಾಮಿ ಮಾತನಾಡಿ, ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ  ಅಭಿವೃದ್ಧಿಗೆ ಯಾವುದೇ  ತೊಂದರೆಯಾಗದಂತೆ  ಬದ್ದತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ.  ಗಂಗನಾಳು ಏತನಿರಾವರಿ ಯೋಜನೆಯಲ್ಲಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು ಈ ಕುರಿತು ತಾವೇ ಖುದ್ದು ನಿಗಾವಹಿಸಿರುವುದಾಗಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜವರಮ್ಮ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್, ಮಾಜಿ ಸದಸ್ಯ ಯೋಗಣ್ಣ, ಮುಖಂಡರಾದ ಎಂ.ಎಸ್.ರಮೇಶ್, ಕಳ್ಳಿಮುದ್ದನಹಳ್ಳಿ ಲೋಕೇಶ್,  ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಎಂಜಿನಿಯರ್ ಮಂಜೇಗೌಡ ಇದ್ದರು.  ಇದೇ ವೇಳೆ  ತಾಲ್ಲೂಕಿನ  ಅಜ್ಜೂರು, ವಡ್ಡರಹಳ್ಳಿ, ಹನೇಮಾರನಹಳ್ಳಿ,  ಬೆಳವಾಡಿ, ಕೊರಟಿಕೆರೆ ಮಾರ್ಗದ 4.97ಕಿ.ಮೀ ರಸ್ತೆಯನ್ನು ರೂ 4.31 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ  ಚಾಲನೆ ನೀಡಲಾಯಿತು.

Post a Comment

0 Comments