ರಾತ್ರಿ ಕಳ್ಳರಿಗಿಂತ ಹಗಲು ಕಳ್ಳಕಾಕರಿಂದ ರಕ್ಷಣೆ ತುರ್ತು; ಆತಂಕ ಹೊರಹಾಕಿದ ಶಾಸಕ

ಅರಕಲಗೂಡು: ತ್ಯಾಗ, ಬಲಿದಾನ ದಿಂದ ದೊರಕಿರುವ ಸ್ವಾತಂತ್ರ್ಯದ ಉಪಯೋಗ  ಕುರಿತು ಅತ್ಮಾವಲೋಕನ ಅಗತ್ಯ  ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.

ಪಟ್ಟಣದ ಬಾಲಕರ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ 75ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾರ್ಥವನ್ನು ತ್ಯಜಿಸಿ ವಿವೇಕಿಗಳಾಗುವುದು ಅಗತ್ಯ, ರಾತ್ರಿ ಕಳ್ಳರಿಗಿಂತ ಹಗಲುಗಳ್ಳರ ಸಂಖ್ಯೆ ಹೆಚ್ಚುತ್ತಿದ್ದು ಇಂತಹವರಿಂದ ದೇಶವನ್ನು ರಕ್ಷಿಸ ಬೇಕಾದ ಸ್ಥಿತಿ ಎದುರಾಗಿದೆ, ಕೋವಿಡ್ ಸಂಕಷ್ಟದಿಂದ  ದೃತಿ ಗೆಡುವ  ಅಗತ್ಯವಿಲ್ಲ, ಸರ್ಕಾರ, ಆರೋಗ್ಯ ಇಲಾಖೆಯ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವ ಮೂಲಕ ಸಂಕಷ್ಟದಿಂದ  ಮುಕ್ತರಾಗೋಣ, ಪ್ರಕೃತಿಯ ಅಸಮತೋಲನದ ಪರಿಣಾಮ  ಪ್ರಾಕೃತಿಕ ವಿಪತ್ತುಗಳು ಸಂಭವಿಸುತ್ತಿದ್ದು ಇದನ್ನು ತಡೆಗಟ್ಟಿ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡುವತ್ತ ಗಮನಹರಿಸುವುದು ಅಗತ್ಯ ಎಂದರು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.  ನಿವೃತ್ತ ಸೈನಿಕರಾದ ಸಿ.ಎಚ್.ಪುರುಷೋತ್ತಮ್, ಡಿ.ಸಿ.ನಾಗೇಶ್, ಡಿಆರ್ ಎಫ್ಒ ಲಕ್ಷ್ಮೀ ನಾರಾಯಣ್, ಜಾನುವಾರು ಅಧಿಕಾರಿ ಸುರೇಶ್, ಹೊಳಲಗೋಡು ಗ್ರಾಪಂ ಪಿಡಿಒ ಗೋಪಾಲ್ ಅವರನ್ನು ಗೌರವಿಸಲಾಯಿತು. ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಕುರಿತ ಪ್ರಚಾರ  ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪೊಲೀಸರು ಪಥ ಸಂಚಲನ ನಡೆಸಿ ಧ್ವಜವಂದನೆ ಸಲ್ಲಿಸಿದರು.

ಪಪಂ ಅಧ್ಯಕ್ಷ ಹೂವಣ್ಣ,ಉಪಾಧ್ಯಕ್ಷ  ಎಚ್.ವಿ. ನಿಖಿಲ್ ಕುಮಾರ್, ಸದಸ್ಯರಾದ ಸುಬಾನ್ ಷರೀಪ್, ಅಬ್ದುಲ್ ಬಾಸಿತ್, ಕೃಷ್ಣಯ್ಯ, ಕೆ.ಎಸ್.ಅನುಷಾ, ಮುಖ್ಯಾಧಿಕಾರಿ ಶಿವಕುಮಾರ್, ತಾಪಂ ಇಒ ಎನ್.ರವಿಕುಮಾರ್, ಬಿಇಒ ಮನಮೋಹನ್, ಸಿಪಿಐ ವೈ.ಸತ್ಯನಾರಾಯಣ್, ಪಿಎಸ್ ಐ ಮಾಲಾ,ಆರ್ ಎಫ್ಒ ಅರುಣ್ ಕುಮಾರ್  ಉಪಸ್ಥಿತರಿದ್ದರು.

                       ಸಂಪಾದಕ - ರವಿ

Post a Comment

0 Comments