ಅರಕಲಗೂಡು: ರೈತರು ಹಾಗೂ ಬಡ ವರ್ಗದವರಿಗೆ ವಿವಿಧ ಇಲಾಖೆಗಳ ಮೂಲಕ ನರೇಗಾ ಯೋಜನೆಯ ಪ್ರಯೋಜನ ದೊರಕಿಸಿಕೊಡದಿದ್ದರೆ ನಾನೇ ಖುದ್ದು ಗ್ರಾಮಸಭೆ ನಡೆಸಿ ಜನರಿಗೆ ಮಾಹಿತಿ ನೀಡುವುದಾಗಿ ಶಾಸಕ ಎ.ಟಿ. ರಾಮಸ್ವಾಮಿ ಗುಡುಗಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನರೇಗಾ ಅನುಷ್ಠಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಪ್ರಯೋಜನಗಳಿದ್ದು ಅವುಗಳ ಫಲ ಜನರಿಗೆ ತಲುಪುವಂತಾಗಬೇಕು. ಕೇವಲ ಕೆರೆ ಹೂಳೆತ್ತುವ ಕಾಮಗಾರಿಗೆ ಒತ್ತು ನೀಡದೆ ಸ್ಮಶಾನ ಅಭಿವೃದ್ಧಿ, ಕಸ ವಿಲೇವಾರಿ ಘಟಕ, ಸಿಮೆಂಟ್ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಎರೆಹುಳು ತೊಟ್ಟಿ, ಅರಣ್ಯೀಕರಣ, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತಿತರ ಇಲಾಖೆಗಳ ಮೂಲಕ ಯೋಜನೆ ಉಪಯೋಗ ಧಕ್ಕಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗೃತರಾಗಿ ಜನರಿಗೆ ನೆರವಾಗಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಕೊನೆ ಸ್ಥಾನದಲ್ಲಿದ್ದ ತಾಲೂಕು ಈಗ ಶೇ. 165ರಷ್ಟು ಗುರಿ ಸಾಧಿಸಿ ಮೊದಲ ಸ್ಥಾನಕ್ಕೇರಿದೆ. ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ರಾಜ್ಯ ವ್ಯಾಪಿ ವಿಸ್ತರಿಸಲು ಮುಂದಾಗಿದೆ ಎಂದು ತಿಳಿಸಿದರು.
ಪೂರ್ವ ನಿರ್ಧರಿತವಾಗಿದ್ದ ಈ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಡೆಸಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಆಯಾ ಹಳ್ಳಿಗಳಲ್ಲಿ ಕರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ 3ನೇ ಅಲೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಪಂ ಇಒ ಎನ್. ರವಿಕುಮಾರ್, ಹೊಳೆನರಸೀಪುರ ತಾಪಂ ಇಒ ಯೋಗೇಶ್ ಮಾತನಾಡಿದರು. ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಕೊಣನೂರು ಗ್ರಾಪಂ ಅಧ್ಯಕ್ಷ ಕೆ.ಬಿ. ರಮೇಶ್, ಬಸವಾಪಟ್ಟಣ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಬಸವಾಪಟ್ಟಣ ಗ್ರಾಪಂ ಅಧ್ಯಕ್ಷೆ ಅನುಷಾ ಯೋಗೇಶ್, ರಾಮನಾಥಪುರ ಗ್ರಾಪಂ ಅಧ್ಯಕ್ಷೆ ಹೇಮಲತಾ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನ 36 ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಗಳು, ಮುಖಂಡರು ಪಾಲ್ಗೊಂಡಿದ್ದರು.
ಸಂಪಾದಕ - ರವಿ
0 Comments