ಅರಕಲಗೂಡು : ಅರಕಲಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತಳಮಟ್ಟದಿಂದ ಬಲಯುತವಾಗಿದ್ದು ನಾಯಕತ್ವದ ಕೊರತೆ ಎಂಬ ಪ್ರಶ್ನೆಯೆ ಇಲ್ಲ, ಕಾರ್ಯಕರ್ತರೆ ನಾಯಕರನ್ನು ರೂಪಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ತಾಲ್ಲೂಕು ಸಂಯೋಜಕ ಸಿ.ಎಂ. ಲಿಂಗಪ್ಪ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಕುರಿತು ನಿಗಾವಹಿಸಲು ಸಂಯೋಜಕರನ್ನು ನೇಮಕ ಮಾಡಿದ್ದು ಅರಕಲಗೂಡು ಮತ್ತು ಹಳ್ಳಿ ಮೈಸೂರು ಬ್ಲಾಕ್ ಗಳ ಹೊಣೆಗಾರಿಕೆಯನ್ನು ತಮಗೆ ವಹಿಸಲಾಗಿದೆ. ಬರಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಹಾಗೂ ಪಕ್ಷದ ಸಂಘಟನೆ ಕುರಿತು ಕಾರ್ಯಕರ್ತರ ಸಭೆ ನಡೆಸಿ ಚರ್ಚಿಸಲಾಗಿದೆ. ತಳಮಟ್ಟದಲ್ಲಿ ಪಕ್ಷ ಬಲಾಡ್ಯ ಕಾರ್ಯ ಕರ್ತರ ಪಡೆ ಹೊಂದಿದೆ. ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಪಕ್ಷಕ್ಕೆ ನಾಯಕತ್ವದ ಕೊರತೆಯೇನೂ ಇಲ್ಲ. ಕೆಪಿಸಿಸಿ ಸೂಚನೆಯಂತೆ ಅಗತ್ಯ ವಸ್ತುಗಳು ಹಾಗೂ ತೈಲ ಬಲೆ ಏರಿಕೆ ಖಂಡಿಸಿ ಈ ತಿಂಗಳ 19 ರಿಂದ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ. ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ರೂ ಒಂದು ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ರೈತರ ಆತ್ಮ ಹತ್ಯೆ, ಹಾವು ಕಡಿತ ಮುಂತಾದ ಪ್ರಕರಣಗಳಲ್ಲಿ ರೂ 5ಲಕ್ಷ ಪರಿಹಾರವನ್ನು ಸರ್ಕಾರವೇ ನೀಡುತ್ತಿದೆ. ಕೋವಿಡ್ ಸಾವು ಕುಟುಂಬಗಳನ್ನೆ ಸರ್ವ ನಾಶಮಾಡಿದೆ. ಎಲ್ಲ ವರ್ಗಗಳ ಜನರಿಗೂ ಸೂಕ್ತ ಪರಿಹಾರ ನೀಡಬೇಕು ಎಂಬುದು ಪಕ್ಷದ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರ ಪಡೆ ರಚಿಸಿ ಕೋವಿಡ್ ನಿಂದ ಮೃತಪಟ್ಟವರ ಪಟ್ಟಿ ತಯಾರಿಸಲಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ನೋಡಿದ ಬಳಿಕ ಸೂಕ್ತ ಪರಿಹಾರಕ್ಕಾಗಿ ಹೋರಾಟ ಆರಂಭಿಸಲಿದೆ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್ ಮಾತನಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜುಲೈ 19 ರಂದು ಜಿಲ್ಲಾ ಕೇಂದ್ರ ಹಾಸನದಲ್ಲಿ ಪ್ರತಿಭಟನೆ ನಡೆಯಲಿದೆ. ಸಂಸದ ಡಿ.ಕೆ.ಸುರೇಶ್, ಮುಖಂಡರಾದ ಮಂಜುನಾಥ ಭಂಡಾರಿ, ಹುಚ್ಚಪ್ಪ ನೇತೃತ್ವ ವಹಿಸುವರು. ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕಿನಲ್ಲೂ ಪ್ರತಿಭಟನೆ ನಡೆಯಲಿದೆ ಎಂದರು. ಚಾಮರಾಜ ನಗರದಲ್ಲಿ ಆಮ್ಲ ಜನಕದ ಕೊರತೆಯಿಂದ ಮೃತಪಟ್ಟವರ ಕುರಿತು ಸರ್ಕಾರ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋವಿಡ್ ಮೃತಪಟ್ಟವರ ಮಾಹಿತಿ ಸಂಗ್ರಹದ ಡೆತ್ ನೋಟ್ ಕಾರ್ಯಕ್ಕೆ ಪಕ್ಷ ಮುಂದಾಗಿದೆ ಎಂದರು. ತಾಲ್ಲೂಕಿನಲ್ಲಿ ಪಕ್ಷ ಸುಭದ್ರವಾಗಿದೆ. ಪಕ್ಷಕ್ಕೆ ನಾಯಕರ ಕೊರತೆ ಇಲ್ಲ, ನಾಯಕರಿಗೆ ಪಕ್ಷ ಅನಿವಾರ್ಯವಾಗಿದೆ. ಕಳೆದ ಬಾರಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಟಿಕೇಟ್ ನಿಂದ ಗೆದ್ದು ಮಧ್ಯದಲ್ಲಿ ಪಕ್ಷದಿಂದ ದೂರ ಉಳಿದಿದ್ದವರು ಮರಳಿ ಪಕ್ಷಕ್ಕೆ ಬರಲು ಮುಂದಾಗಿದ್ದು ಈ ಕುರಿತು ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳುವರು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಪ್ರಸನ್ನ ಕುಮಾರ್ ಜಿಪಂ, ತಾಪಂ ಮೀಸಲಾತಿ ಬಗ್ಗೆ ತೃಪ್ತಿ ಇದೆ. ಎಲ್ಲ ಸ್ಥಾನಗಳಿಗೂ ಪಕ್ಷ ಸ್ಪರ್ಧಿಸಲಿದ್ದು ಹೆಚ್ಚಿನ ಸ್ಥಾನಗಳನ್ನು ಪಡೆಯುವುದು ಖಚಿತವಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಎಚ್.ಟಿ.ಮಂಜುನಾಥ್, ಮುಖಂಡರಾದ ಡಾ.ದಿನೇಶ್ ಬೈರೇಗೌಡ, ಶೇಷೇಗೌಡ, ಜಮೀರ್ ಅಹಮದ್, ಗಣೇಶ್ ವೇಲಾಪುರಿ ಗೋಷ್ಠಿಯಲ್ಲಿದ್ದರು.
ಸಂಪಾದಕ - ರವಿ
0 Comments