ಅರಕಲಗೂಡು: ಭೂ ಮಾಪನ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಿ ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನಲೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಭೂ ಮಾಪಕರಿಗೆ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವರ್ಷದ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ ಉತ್ತಮವಾಗಿ ಕೆಲಸ ನಿರ್ವಹಿಸಿದ ಸೇವೆ ಪರಿಗಣಿಸಿ ಅರಕಲಗೂಡು ತಾಲೂಕು ಪರವಾನಗಿ ಭೂ ಮಾಪಕ ಹೇಮಂತ್ ಕುಮಾರ್ ವಿ. ಬೆಟ್ಟಸೋಗೆ, ಹಾಸನ ಭೂ ದಾಖಲೆಗಳ ಉಪ ನಿರ್ದೇಶಕ ಎಚ.ಎಸ್. ಸುಜಯ್ ಕುಮಾರ್, ಚನ್ನರಾಯಪಟ್ಟಣ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಚ್.ಸಿ. ಲಲ್ಲು ಪ್ರಸಾದ್, ಹಾಸನ ತಾಲೂಕು ಸರ್ಕಾರಿ ಭೂ ಮಾಪಕ ಸಿ.ಎಂ. ಕುಮಾರ್ ಅವರಿಗೆ ಅಭಿನಂದನಾ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ಪ್ರದಾನ ಮಾಡಿದರು.
ಇಲಾಖೆಗಳ ಪ್ರಮುಖ ಕಾರ್ಯ ಚಟುವಟಿಕೆಗಳ ಪೈಕಿ ಮೋಜಿಣಿ ತಂತ್ರಾಂಶದಲ್ಲಿ ವಿಲೆಯಾದ ಪ್ರಗತಿ, ಆಕಾರ್ ಬಂದ್ ಗಣಕೀಕರಣ, ದಾಖಲೆಗಳ ಪುನರ್ ನಿರ್ಮಾಣ ಹಾಗೂ ಕೆರೆ, ರಾಜ ಕಾಲುವೆ, ಅರಣ್ಯ ಭೂಮಿ, ಸರ್ಕಾರಿ ಜಮೀನು ಅಳತೆ, ರೆವಿನ್ಯೂ ಕೋರ್ಟ್ ಕೇಸ್ ಮಾನಿಟರಿ ಸಿಸ್ಟಮ್ ನಲ್ಲಿ ಆಗಿರುವ ಪ್ರಗತಿಯನ್ನು ಮಾನದಂಡವಾಗಿ ಪರಿಗಣಿಸಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರ ಕಾರ್ಯವೈಖರಿಯನ್ನು ಸಚಿವರು ಶ್ಲಾಘಿಸಿದರು.
ಬೆಂಗಳೂರು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಜೆ. ಮಂಜುನಾಥ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯಕ್ತ ಸುನಿಲ್ ಕುಮಾರ್, ಭೂ ಮಾಪನ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕೆ. ಜಯಪ್ರಕಾಶ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಇತರರು ಇದ್ದರು.
0 Comments