ಬೆಳವಾಡಿ ನಿಂಗೇಗೌಡರ ಅಧ್ಯಕ್ಷತೆಯಲ್ಲಿ ಪಿಎಸಿಸಿ ವಾರ್ಷಿಕ ಮಹಾಸಭೆ: ಕೆ.‌ಸತೀಶ್ ಮೆಚ್ಚುಗೆ

ಅರಕಲಗೂಡು: ಕೃಷಿಕರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಿ ಆರ್ಥಿಕವಾಗಿ ಸಬಲರಾಗಲು ಸಹಕಾರ ಸಂಘಗಳು ಹೆಚ್ಚಿನ ಪಾತ್ರ ವಹಿಸುತ್ತಿವೆ. ಹೀಗಾಗಿ ರೈತರು ಸಂಘಗಳ ಏಳಿಗೆಗೆ ಉತ್ತಮ ಸಹಕಾರ ನೀಡಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ. ಸತೀಶ್ ಹೇಳಿದರು.

ತಾಲೂಕಿನ ಬೆಳವಾಡಿ ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021- 22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ ಸಹಕಾರ ಸಂಘಗಳು ರೈತರ ಶ್ರೇಯೋಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾರ್ಯಗಳಿಗೆ ಇತ್ತು ನೀಡಿವೆ. ಇಂತಹ ಸಂಘಗಳ ಸಾಲಿನಲ್ಲಿ ಬೆಳವಾಡಿ ಸಂಘ ಮಂಚೂಣಿ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್. ನಿಂಗೇಗೌಡ ಮಾತನಾಡಿ, ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಅಭಾವ ಉಂಟಾದ ಸಂದರ್ಭದಲ್ಲಿ ಈ ಭಾಗದ ರೈತರಿಗೆ ಕೊರತೆ ಆಗದಂತೆ ಸಂಘದ ಮೂಲಕ ಅಗತ್ಯ ರಸಗೊಬ್ಬರ ಸರಬರಾಜು ಮಾಡಿಕೊಂಡು ರೈತರಿಗೆ ವಿತರಿಸಲಾಯಿತು. ಕೃಷಿಕರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಘ ಹಿಂದೆ ಬಿದ್ದಿಲ್ಲ. ಎಲ್ಲ ನಷ್ಟಗಳನ್ನು ಹೋಗಲಾಡಿಸಿ ಸಂಘವು ಈ ಬಾರಿ 2.42 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. 12 ಲಕ್ಷ ರೂ ವೆಚ್ಚದಲ್ಲಿ ಹೊಸ ಕಟ್ಟಡ ಸ್ಥಾಪಿಸಲು ಈ ಸಲ 6 ಲಕ್ಷ ರೂ ಮುಂಗಡ ಹಣ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ಕಳೆದ 2017- 18ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರೈತರ 1 ಲಕ್ಷ ರೂ ಸಾಲ ಮನ್ನಾ ಯೋಜನೆಯಡಿ 9 ಸದಸ್ಯರಿಗೆ 1.95 ಲಕ್ಷ ರೂ ಬಾಕಿ ಉಳಿದಿದೆ. ಇನ್ನುಳಿದಂತೆ ಶೇ. 100ರಷ್ಟು ಸಾಲ ವಸೂಲಾತಿ ಆಗಿದೆ. ಸಂಘದಲ್ಲಿ 41 ಸ್ವಸಹಾಯ ಗುಂಪುಗಳಿದ್ದು ಈ ಪೈಕಿ 2020- 21ನೇ ಸಾಲಿಗೆ 14 ಸ್ವಸಹಾಯ ಗುಂಪುಗಳಿಗೆ 63.50 ಲಕ್ಷ ರೂ ಸಾಲ ನೀಡಲಾಗಿದ್ದು, 41.74 ಲಕ್ಷ ರೂ ಬಾಕಿ ಇದೆ. ಪೆಸಕ್ತ ಸಾಲಿನಲ್ಲಿ 454 ಸದಸ್ತರುಗೆ 238.38 ಲಕ್ಷ ರೂ ಬೆಳೆ ಸಾಲ ನೀಡಲಾಗಿದೆ. ರೈತರ ಕ್ಷೇಮ ನಿಧಿಯಿಂದ ಮರಣ ಹೊಂದಿದ 16 ಜನ ಸದಸ್ತರುಗೆ 80 ಸಾವಿರ ರೂ ನಾಮ ನಿರ್ದೇಶಕರಿಗೆ ನೀಡಲಾಗಿದೆ. ಕ್ಷೇಮ ನಿಧಿಗೆ ಪ್ರಸಕ್ತ ಸಾಲಿಗೆ 1.84 ಲಕ್ಷ ರೂ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ಸಂಘದ ಮೂಲಕ ಹೊಸ ಸಾಲ ವಿತರಿಸುವಂತೆ ಸಭೆಯಲ್ಲಿ ರೈತರು ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದ ಸಂಘದ ಮೇಲ್ವಿಚಾರಕ ನಿರ್ದೇಶಕ ಎಂ.ಎಸ್. ಬಸವಾರಜ್, ಸರ್ಕಾರದಿಂದ ಅನುದಾನ ಬಂದಿಲ್ಲ, ಮುಂದಿನ ವರ್ಷ ಸರ್ಕಾರ ಹಣ ಒದಗಿಸಿದರೆ ಹೊಸ ಸಾಲ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಕೆ. ದಯಾಪರಮೂರ್ತಿ 2021- 22ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ವರದಿ ಮಂಡಿಸಿದರು. ಪಶು ವೈದ್ಯಾಧಿಕಾರಿ ಡಾ. ಚಿರಂಜಿವಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಅಂಕನಹಳ್ಳಿ ರಾಜೇಗೌಡ, ನಿರ್ದೇಶಕರಾದ ಚನ್ನಯ್ಯ, ದೊಡ್ಡಹಳ್ಳಿ ರಾಜೇಗೌಡ, ಇಂದ್ರಮ್ಮ, ದೇವರಾಜು, ಕೃಷ್ಣೇಗೌಡ, ರವಿ, ಮಂಜುನಾಥ್, ರೇವಣ್ಣ, ಅಶೋಕ್ ಇತರರಿದ್ದರು.

Post a Comment

0 Comments