ಅರಕಲಗೂಡು: ತಾಲೂಕಿನ ಸಾಲುಕೊಪ್ಪಲು- ಬಾಣದಹಳ್ಳಿ ಹಾಗೂ ಗರೀಘಟ್ಟ ಮಾರ್ಗದ ರಸ್ತೆಗೆ ಹೊಸದಾಗಿ ಹಾಕಿರುವ ಡಾಂಬರು ಕಿತ್ತು ಕಳಪೆ ಕಾಮಗಾರಿಗೆ ಮೂಕಸಾಕ್ಷಿಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಹದಗೆಟ್ಟು ಹೋಗಿದ್ದ ಸಾಲುಕೊಪ್ಪಲು- ಬಾಣದಹಳ್ಳಿ ಹಾಗೂ ಗರೀಘಟ್ಟ ಮಾರ್ಗದ ರಸ್ತೆ ಸಾರ್ವಜನಿಕರು ತಿರುಗಾಡಲು ಕೂಡ ಸಾಧ್ಯವಾಗದೆ, ವಾಹನಗಳ ಓಡಾಟಕ್ಕೆ ನರಕ ಸದೃಶ್ಯವಾಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಂಡರೂ ಕಳಪೆ ಕಾಮಗಾರಿ ಪರಿಣಾಮ ಮತ್ತೆ ಹದಗೆಟ್ಟು ಹೋಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2.20 ಕೋಟಿ ರೂ ವೆಚ್ಚದಲ್ಲಿ ರಸ್ತೆಗೆ ಕಳೆದ ಮೂರು ತಿಂಗಳ ಹಿಂದಷ್ಟೆ ಡಾಂಬರು ಹಾಕಲಾಗಿತ್ತು. ಕಳಪೆಯಿಂದಾಗಿ ಅಲ್ಲಲ್ಲಿ ಡಾಂಬರು ಕಿತ್ತು ಜಲ್ಲಿಕಲ್ಲುಗಳು ಮೇಲೆದ್ದಿವೆ. ರಸ್ತೆ ಮತ್ತೆ ಹಾಳಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾದ ಅನುದಾನ ಪೋಲಾಗದಂತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವಂತೆ ಶಾಸಕರು ಸಭೆ ಸಮಾರಂಭಗಳಲ್ಲಿ ಮಾರುದ್ದದ ಭಾಷಣ ಬಿಗಿಯುತ್ತಾರೆ. ಆದರೆ ಗುತ್ತಿಗರದಾರರು ಮತ್ತು ಇಂಜಿನಿಯರ್ ಗಳು ಕಳಪೆ ಕಾಮಗಾರಿ ನಡೆಸುವುದು ಮಾತ್ರ ಎಗ್ಗಿಲ್ಲದೆ ಸಾಗಿದೆ. ಶಾಸಕರು ಮೌನಕ್ಕೆ ಶರಣಾಗದೆ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ದ ಕ್ರಮ ಜರುಗಿಸಿ ರಸ್ತೆಗೆ ಮರು ಡಾಂಬರೀಕರ ನಡೆಸಿ ಅಭಿವೃದ್ಧಿ ಪಡಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ಕಳಪೆ ಕಾಮಗಾರಿಯಿಂದಾಗಿ ಡಾಂಬರು ಕಿತ್ತು ರಸ್ತೆ ಹಾಳಾಗಿದೆ. ಬಾಣದಹಳ್ಳಿ ಹಳ್ಳದ ಮೋರಿ ಬಳಿ ಡಾಂಬರು ಕಳಚಿ ಬಿದ್ದು ಕಂದಕ ಕಾಣಿಸಿಕೊಂಡಿದೆ. ಗುತ್ತಿಗೆದಾರ ಮಳೆಗಾಲದಲ್ಲೇ ಡಾಂಬರು ಹಾಕಿದ್ದರಿಂದ ಕಳಪೆಯಾಗಿದೆ. ಸ್ಥಳದಲ್ಲಿ ಇಂಜಿನಿಯರ್ ಕೂಡ ಇರಲಿಲ್ಲ. ರಸ್ತೆಗೆ ಮರು ಡಾಂಬರು ಹಾಕಿ ಸಂಬಂಧಪಟ್ಟವರ ವಿರುದ್ದ ಕ್ರಮ ಜರುಗಿಸಬೇಕು ಎನ್ನುತ್ತಾರೆ ಗಣೇಶ್, ಗ್ರಾಪಂ ಮಾಜಿ ಸದಸ್ಯ.
ಮಳೆಗಾಲವಾದ ಕಾರಣ ಶೀತ ಹೆಚ್ಚಾಗಿ ಗರೀಘಟ್ಟ ಮಾರ್ಗದ ಡಾಂಬರು ಕಿತ್ತಿದೆ. ಸ್ಥಳಕ್ಕೆ ಪಿಎಂಜಿಎಸ್‌ವೈ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ಸಹ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮರು ಡಾಂಬರೀಕರಣ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
- ಪ್ರಶಾಂತ್, ಪಿಎಂಜಿಎಸ್‌ವೈ ಸಹಾಯಕ ಇಂಜಿನಿಯರ್.
0 Comments