ಅರಕಲಗೂಡು: ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ 15ನೇ ವಾರ್ಡ್ ಸದಸ್ಯೆ ಶಾರದಾ ಪೃಥ್ವಿರಾಜ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಶಾರದಾ ಪೃಥ್ವಿರಾಜ್ ಮತ್ತು ಬಿಜೆಪಿಯಿಂದ ಎಚ್.ಎಸ್.ರಶ್ಮಿ ಮಂಜು ನಾಮ ಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ರಶ್ಮಿ ಮಂಜು ನಾಮ ಪತ್ರ ವಾಪಸ್ ಪಡೆದ ಕಾರಣ ಶಾರದಾ ಪೃಥ್ವಿರಾಜ್ ಅವಿರೋಧವಾಗಿ ಆಯ್ಕೆಯಾದರು. ಪಪಂ ನ 17 ಸದಸ್ಯರಲ್ಲಿ 12 ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದು, ಜೆಡಿಎಸ್ ನ ಇಬ್ಬರು ಮತ್ತು ಬಿಜೆಪಿಯ 3 ಮಂದಿ ಸದಸ್ಯರು ಗೈರಾಗಿದ್ದರು. ಚುನಾವಣೆ ನಡೆದಲ್ಲಿ ಮತಗಳ ಕೊರತೆ ಎದುರಾಗಿ ಮೈತ್ರಿ ಕೂಟದ ಅಭ್ಯರ್ಥಿಗೆ ಆತಂಕದ ಸ್ಥಿತಿ ಉಂಟಾಗಬಹುದೆಂಬ ಕಾರಣ ದಿಂದ ಶಾಸಕ ಎ.ಟಿ. ರಾಮಸ್ವಾಮಿ ಸಭೆಯಲ್ಲಿ ಹಾಜರಿದ್ದರು. ಬಿಜೆಪಿ ಅಭ್ಯರ್ಥಿ ನಾಮ ಪತ್ರ ವಾಪಸ್ ಪಡೆಯುತ್ತಿದ್ದಂತೆ ಸಭೆಯಿಂದ ನಿರ್ಗಮಿಸಿದರು.
ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಚುನಾವಣಾ ಕಾರ್ಯ ನಿರ್ವಹಿಸಿದರು. ಪಪಂ ಮುಖ್ಯಾಧಿಕಾರಿ ಎಸ್.ಆರ್.ಸವಿತಾ ಉಪಸ್ಥಿತರಿದ್ದರು.
17 ಸದಸ್ಯ ಬಲದ ಪಪಂ ನಲ್ಲಿ ಕಾಂಗ್ರಸ್ 5, ಬಿಜೆಪಿ 6 ಮತ್ತು ಜೆಡಿಎಸ್ 6 ಸದಸ್ಯ ಬಲ ಹೊಂದಿದ್ದು ಯಾವುದೇ ಪಕ್ಷಕ್ಕೆ ಬಹುಮತ ವಿಲ್ಲದೆ ಅತಂತ್ರ ಸ್ಥಿತಿ ಇದ್ದು ಜೆಡಿಎಸ್ ಮತ್ತು ಕಾಂಗ್ರಸ್ ಮೈತ್ರಿ ಮಾಡಿಕೊಂಡಿವೆ. ಮೊದಲ ಅವಧಿಯ 15 ತಿಂಗಳು ಜೆಡಿಎಸ್ ನ ಹೂವಣ್ಣ ಅಧ್ಕ್ಷಕ್ಷರಾಗಿದ್ದರೆ ಎರಡನೆ ಅವಧಿಯಲ್ಲಿ ಕಾಂಗ್ರಸ್ಸಿನ ಅಬ್ದುಲ್ ಬಾಸಿದ್ ಅಧ್ಯಕ್ಷರಾಗಿದ್ದು ಆತಂಕರಿಕ ಒಪ್ಪಂದದAತೆ ಇವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು.
ಇದೇ ಮೊದಲ ಬಾರಿಗೆ ದಲಿತ ವರ್ಗದ ಮಹಿಳೆಯೊಬ್ಬರು ಪಪಂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು, ಈ ಸಮುದಾಯದವರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಕಾಂಗ್ರಸ್ ಮತ್ತು ಜೆಡಿಎಸ್ ಕಾರ್ಯಕರ್ತರು ನೂತನ ಅಧ್ಯಕ್ಷರ ಮೆರವಣಿಗೆ ನಡೆಸಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಡಾ. ದಿನೇಶ್ ಭೈರೇಗೌಡ, ಎಚ್.ಪಿ. ಶ್ರೀಧರ್‌ಗೌಡ, ಗಣೇಶ್ ವೇಲಾಪುರಿ, ನಾಗರಾಜ್, ಮಂಜುನಾಥ್, ಗೋಪಾಲಸ್ವಾಮಿ, ಸಂತೋಷ್, ಜೆಡಿಎಸ್ ಮುಖಂಡ ಅಬ್ದುಲ್ ಅಲೀಮ್, ಪಪಂ ಸದಸ್ಯರು, ಬೆಂಬಲಿಗರು ಮತ್ತು ಕಾರ್ಯಕರ್ತರು ಅಧ್ಯಕ್ಷರನ್ನು ಗೌರವಿಸಿ ವಿಜಯೋತ್ಸವ ಆಚರಿಸಿದರು.
ಪಪಂ ಬಿಜೆಪಿ ಸದಸ್ಯೆ ರಶ್ಮಿ ಮಾತನಾಡಿ, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಪಂಚಾಯಿತಿ ಆಡಳಿತದಲ್ಲಿ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹವಣಿಸಿತ್ತು. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ ಕಾರಣಕ್ಕಾಗಿ ದಲಿತ ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿಯಿತು ಎಂದರು.
0 Comments