ರವಿ ಬೆಟ್ಟಸೋಗೆ
ಅರಕಲಗೂಡು: ಪಟ್ಟಣದಲ್ಲಿ ಮೇ 8ರಂದು ಹಮ್ಮಿಕೊಂಡಿರುವ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಅಭಿಮಾನಿಗಳ ನೇತೃತ್ವದಲ್ಲಿ ಭರ್ಜರಿ ಸಿದ್ದತೆಗಳು ಸಾಗಿದ್ದು ರಾಜಕೀಯ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಸಜ್ಜುಗೊಂಡಿದೆ.
ಪಟ್ಟಣದ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಸುಮಾರು ಹತ್ತು ಸಾವಿರ ಜನರು ಕುಳಿತುಕೊಳ್ಳಲು ಆಸನಗಳೊಂದಿಗೆ ಕಣ್ಣು ಕಕ್ಕುವಂತಹ ಆಕರ್ಷಕವಾದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಪೇಟೆ- ಕೋಟೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ.
ಹಳ್ಳಿಮೈಸೂರು ಸೇರಿದಂತೆ ತಾಲೂಕಿನ ಐದು ಹೋಬಳಿಗಳಲ್ಲಿ ಸಾವಿರಾರು ಜನರನ್ನು ಕರೆತರುವ ನಿಟ್ಟಿನಲ್ಲಿ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದ್ದು ಈಗಾಗಲೇ ಹಳ್ಳಿಗಳಲ್ಲಿ ಜನ ಸಂಘಟಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಹಿಳೆಯರಿಗೆ ಬಾಗಿನ ನೀಡಲು ಅಗತ್ಯ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ.
ರಾಜಕಾರಣದ ಸ್ಪಷ್ಟ ಸ್ವರೂಪ ಪಡೆದುಕೊಂಡಿರುವ ಕಾರ್ಯಕ್ರಮದ ಯಶಸ್ವಿಗೆ ಶ್ರೀಧರ್‌ಗೌಡ ಅಭಿಮಾನಿಗಳು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಹಾಗೆ ನೋಡಿದರೆ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಮುಖಡರು ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಲಕ್ಷಗಟ್ಟಲೆ ಹಣ ವ್ಯಯಿಸಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ ಯುವಕರನ್ನು ಸೆಳೆಯಲಾಗುತ್ತಿದೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದಡಿ ಇಟ್ಟಿರುವ ಶ್ರೀಧರ್ ಗೌಡ ಅವರು ಇದೀಗ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಮಹಿಳಾ ಮತದಾರರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಕ್ಕಿಂತ ಕಾಂಗ್ರೆಸ್ ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮಾಜಿ ಸಚಿವ ಎ. ಮಂಜು ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಗೆ ಜಿಗಿದ ನಚಿತರ ಪಕ್ಷದಲ್ಲಿ ನಾಯಕತ್ವದ ಕೊರತೆ ಕಾಡಿತ್ತು.
ಕಾಂಗ್ರೆಸ್ ಪಕ್ಷದ ಕದ ತಟ್ಟುವವರ ಸಂಖ್ಯೆ ಸಹ ನಾಗಾಲೋಟದಲ್ಲಿ ಏರತೊಡಗಿತು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿ. ಕಬ್ಬಳಿಗೆರೆ ಭೈರೇಗೌಡರ ಪುತ್ರ ಡಾ. ದಿನೇಶ್ ಅವರು ಕಳೆದೆರಡು ವರ್ಷದಿಂದಲೂ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟು ಅಪಾರ ಸಂಪನ್ಮೂಲ ವ್ಯಯಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಸಮಾಜ ಸೇವಕ ಎಂ.ಟಿ. ಕೃಷ್ಣೇಗೌಡ ಅವರು ರಾಜಕೀಯ ಅಖಾಡಕ್ಕೆ ಧುಮುಕಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದು ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಕೃಷ್ಣೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತತೆ ಸಂಪಾದಿಸಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಲೋಕಾಯುಕ್ತ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಗೌಡ ಅವರು ಸ್ವಯಂ ನಿವೃತ್ತಿ ಘೋಷಿಸಿ ಕೆಲ ತಿಂಗಳ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಸಂಸದ ಡಿ.ಕೆ. ಸುರೇಶ್ ಅವರನ್ನು ತಾಲೂಕಿಗೆ ಕರೆಸಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿದರು. ಶ್ರೀಧರ್ ಗೌಡ ಅವರು ಕಾಂಗ್ರೆಸ್ ಸೇರಿದ ನಂತರ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ರಾಜಕೀಯ ಮೇಲಾಟದ ನಡುವೆ ಸಿದ್ದರಾಮಯ್ಯ ಅವರು ಮುಖಂಡ ಎಂ.ಟಿ. ಕೃಷ್ಣೇಗೌಡರ ಸಹೋದರ ಎಂ.ಸಿ. ರಂಗಸ್ವಾಮಿ ಅವರ ದೊಡ್ಡಮಗ್ಗೆ ಗ್ರಾಮದ ಮನೆಗೆ ಭೇಟಿ ನೀಡಿ ಗೌರವಾತ್ಯೀಥ್ಯ ಸ್ವೀಕರಿಸಿದ್ದರು. ಇದಾದ ಬಳಿಕ ಕೃಷ್ಣೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿಯಾಗಿದೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡಿತ್ತು. ಇದೀಗ ಶ್ರೀಧರ್ ಗೌಡ ಅವರು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೆ ಕರೆಸಿ ಪಟ್ಟಣದಲ್ಲಿ ರಾಜ್ಯ ಮಟ್ಟದ ವಿಶ್ವ ತಾಯಂದಿರ ದಿನಾಚಣೆ ಆಚರಿಸಲು ಅದ್ದೂರಿ ಸಿದ್ದತೆ ಕೈಗೊಂಡಿರುವುದು ರಾಜಕೀಯ ವಿರೋಧಿಗಳಿಗೆ ಹುಬ್ಬೇರುವಂತೆ ಮಾಡಿದೆ.
ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎ. ಮಂಜು ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗೆ ಪೈಪೋಟಿ ಶುರುವಾಗಿತ್ತು. ಅಂದು ಸಾಮಾಜಿಕ ನ್ಯಾಯದಡಿ ಹಿಂದುಳಿದ ವರ್ಗಕ್ಕೆ ಸೇರಿದ್ದ ಪುಟ್ಟಸ್ವಾಮಿ ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು. ಪುಟ್ಟಸ್ವಾಮಿ ಅವರು ಕ್ಷೇತ್ರದಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಆ ವೇಳೆ ಅರಕಲಗೂಡು ತಾಲೂಕು ಕಚೇರಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸ್ಥಾಪಿಸಿದ್ದ ಡಾ. ಅಂಬೇಡ್ಕರ್ ಪ್ರತಿಮೆ ಉದ್ಘಾಟನೆಗೆ ಎ. ಮಂಜು ಅವರು ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಿ ಶಕ್ತಿ ಪ್ರದರ್ಶನ ನಡೆಸಿದ್ದರು. ಕಡೆ ಗಳಿಗೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಜಿ. ಪರಮೇಶ್ವರ್ ಅವರು ಎ. ಮಂಜು ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳು ಪ್ರತ್ಯೇಕವಾಗಿ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಕಳೆದ ತಿಂಗಳು ಕೃಷ್ಣೇಗೌಡ ಅವರು ಸಿದ್ದರಾಮಯ್ಯ ಅವರನ್ನು ತಮ್ಮ ಮನೆಗೆ ಕರೆಸಿದ ಬೆನ್ನಲ್ಲೆ ಶ್ರೀಧರ್‌ಗೌಡ ಅವರು ಡಿ.ಕೆ. ಶಿವಕುಮಾರ್ ಅವರನ್ನು ಶೀಘ್ರದಲ್ಲೇ ತಾಲೂಕಿಗೆ ಕರೆಸಿ ಕಾರ್ಯಕರ್ತರಲ್ಲಿ ಮೂಡಿದ್ದ ಗೊಂದಲ ನಿವಾರಿಸಲು ಪ್ರಯತ್ನಿಸಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಕಾಕತಾಳೀಯ ಎಂಬಂತೆ ಡಿ.ಕೆ. ಶಿವಕುಮಾರ್ ಅವರೇ ಇದೀಗ ಪಟ್ಟಣದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿರುವುದು ಕಾಂಗ್ರೆಸ್‌ನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇತ್ತ ಮಾಜಿ ಸಚಿವ ಎ. ಮಂಜು, ಶಾಸಕ ಎ.ಟಿ. ರಾಮಸ್ವಾಮಿ ಅವರು ಕಾಂಗ್ರೆಸ್ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವ ಶ್ರೀಧರ್‌ಗೌಡ ರಾಜಕೀಯ ಶಕ್ತಿ ಕುಂದಿಸಲು ವಿರೋಧಿಗಳು ಕುತಂತ್ರ ರೂಪಿಸುತ್ತಿದ್ದಾರೆ ಎನ್ನುವ ಆರೋಪಗಳು ಅಭಿಮಾನಿಗಳಿಂದ ಕೇಳಿಬರುತ್ತಿವೆ.
ಮಹಿಳೆಯರನ್ನು ಭೂ ತಾಯಿಗೆ ಹೋಲಿಸಲಾಗುತ್ತದೆ. ಹೀಗಾಗಿ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಕ್ಷೇತ್ರದಲ್ಲಿ ಜನರಿಗೆ ಉಪಕಾರಿಯಾಗುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಪ್ರತಿ ಹೋಬಳಿ ಕೇಂದ್ರಗಳಲ್ಲಿ ಬೃಹತ್ ಆರೋಗ್ಯ ಮೇಳ ನಡೆಸಲಾಗುತ್ತಿದೆ. ಕಟ್ಟ ಕಡೆಯ ವ್ಯಕ್ತಿಯ ಹಿತ ಕಾಯುವುದು ನನ್ನ ಕರ್ತವ್ಯವಾಗಿದೆ. ಇದಕ್ಕಾಗಿ ರಾಜಕೀಯ ಪ್ರವೇಶಿಸಿದ್ದು ಜನಸಾಮಾನ್ಯರ ಪರವಾಗಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತಿದ್ದೇನೆ. ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದರಲ್ಲಿ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ.
- ಎಚ್.ಪಿ. ಶ್ರೀಧರ್‌ಗೌಡ.
0 Comments