ಅರಕಲಗೂಡು: ಅಂಬೇಡ್ಕರ್ ಆಶಯಗಳಿಗೆ ವಿರುದ್ದವಾಗಿ ಆಳುವ ಸರ್ಕಾರಗಳು ಒಂದು ವರ್ಗಕ್ಜೆ ಸೀಮಿತವಾಗಿ ಆಡಳಿತ ನಡೆಸುವುದು ತರವಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ತಾಲೂಕಿನ ಮಲ್ಲಿಪಟ್ಟಣ ಸಮುದಾಯ ಭವನದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಹಯೋಗದಲ್ಲಿ ಅಂಬೇಡ್ಕರ್ 131ನೇ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ವಿಶ್ವವೇ ಮೆಚ್ಚುವ ಸಂವಿಧಾನ ರಚಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ. ಆದರೆ ಜಂತರ್ ಮಂತರ್ ನಲ್ಲಿ ಕಳೆದ 2018ರಲ್ಲಿ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಲಾಯಿತು. ಇದು ದೇಶದ ಸಾರ್ವಭೌಮತೆ, ಅಖಂಡತೆ ಹಾಗೂ ಸಮಾನತೆಯನ್ನು ಬೆಂಕಿಯಲ್ಲಿ ಸುಟ್ಟಂತೆ. ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದ್ದು ಇಂತಹ ಕೃತ್ಯವನ್ನು ಖಂಡಿಸಬೇಕು ಎಂದರು.
ಸಮಾಜದ ಶಕ್ತಿಯನ್ನು ಕೆಲವು ರಾಜಕೀಯ ಪಕ್ಷಗಳು ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವಿನಂತಿಸಿದರು.
ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಅಂಬೇಡ್ಕರ್ ಶೋಷಿತರ ಧ್ವನಿಯಾಗಿ ಎಲ್ಲರಿಗೂ ಸಮಾನ ಹಕ್ಕು ನೀಡಿದರು. ಇವರು ರಚಿಸಿದ ಸಂವಿಧಾನದ ಫಲವಾಗಿ ಎಲ್ಲ ವರ್ಗದವರಿಗೂ ರಾಜಕೀಯ ಅಧಿಕಾರ ಸಿಗುವಂತಾಗಿದೆ. ಅಂಬೇಡ್ಕರ್ ವಿಚಾರ ಧಾರೆಗಳನ್ನು ಅರಿತು ಅವರ ಆದರ್ಶಗಳನ್ನು ಪಾಲಿಸುವ ಪರಿಪಾಠ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಜೀವನದ ಮೌಲ್ಯವಾಗಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಹಾಸನ ವಿಭಾಗದ ಲೆಕ್ಕಪರಿಶೋಧಕ ಅಧಿಕಾರಿ ಬಿ.ಸಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮಹದೇವ್ ಅತ್ನಿ ಪ್ರಧಾನ ಭಾಷಣ ಮಾಡಿದರು. ಹಾಸನ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಚನ್ನಕೇಶವ, ಮುಖಂಡರಾದ ಈರೇಶ್ ಹಿರೇಹಳ್ಳಿ, ಮಲ್ಲೇಶ್ ಅಂಬುಗ, ವಿಷ್ಣು ಪ್ರಕಾಶ್, ಮಾಗಲು ಹರೀಶ್, ಮಹೇಶ್, ಗೌರಮ್ಮ, ಸುಮಾ, ನಜೀರ್ ಅಹಮದ್, ಅಕ್ರಂ ಪಾಷಾ, ಜಮೀರ್ ಪಾಷ, ಲಕ್ಷ್ಮಣ್, ವೆಂಕಟೇಶ್, ತಾಪಂ ಮಾಜಿ ಉಪಾಧ್ಯಕ್ಷ ನಾಗರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ಅತ್ನಿ ಹರೀಶ್, ದಸಂಸ ಅಂಬೇಡ್ಕರ್ ವಾದ ತಾಲೂಕು ಅಧ್ಯಕ್ಷ ದುಮ್ಮಿ ಕೃಷ್ಣ ಇತರರಿದ್ದರು.
0 Comments