ಅರಕಲಗೂಡು: ತಾಲ್ಲೂಕಿನಲ್ಲಿ ಭಾರಿ ಮಳೆಗೆ ವಿವಿದೆಡೆ ಮನೆಗಳಿಗೆ ಮತ್ತು ಬೆಳೆಗಳಿಗೆ ಹಾನಿಯಾಗಿದೆ.
ಕಸಬಾ ಹೋಬಳಿಯ ಹೆಬ್ಬಾಲೆ ಗ್ರಾಮದಲ್ಲಿ ಮೂರು ಮನೆಗಳ ಗೋಡೆ ಕುಸಿದಿದೆ. ಮುತ್ತಿಗೆ ಗ್ರಾಮದಲ್ಲಿ ನಾಗರಾಜ್ ಎಂಬುವವರ ಮನೆಗೆ ಹಾನಿಯಾಗಿದ್ದರೆ ಮಾದಿಹಳ್ಳಿ ಕಾಲೋನಿಯ ದ್ಯಾವಯ್ಯ ಎಂಬುವವರ ಮನೆ ಪೂರ್ಣ ಕುಸಿದು ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.
ದೊಡ್ಡಮಗ್ಗೆ ಹೋಬಳಿ ಮುತ್ತಗದ ಹೊಸೂರು ಗ್ರಾಮದ ತಿಮ್ಮೇಗೌಡ ಅವರ ಮನೆ ಹಾಗೂ ಕಾರಹಳ್ಳಿ ಗ್ರಾಮದ ನಾಗರಾಜ್, ಮಲ್ಲಿಪಟ್ಟಣ ಹೋಬಳಿ ಕೆಂದಿಣ್ಣೆ ಗ್ರಾಮದ ರಂಗಯ್ಯ ಅವರ ಮನೆಯ ಗೋಡೆಗಳು ಕುಸಿದು ಹಾನಿ ಸಂಭವಿಸಿದೆ.
ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಸುಮಾರು 25 ಮನೆಗಳು ಕುಸಿದು ಹಾನಿಯಾಗಿದೆ.
ಬೆಳೆ ಹಾನಿಯೂ ಅಪಾರ ಪ್ರಮಾಣದಲ್ಲಿ ಆಗಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತರೆಳಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದರು.
ಮಂಗಳವಾರ ಬೆಳಗಿನ 8 ಗಂಟೆ ಅವಧಿಗೆ ತಾಲ್ಲೂಕಿನ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ಮಾಹಿತಿ ಹೀಗಿದೆ. ಅರಕಲಗೂಡು 30.4 ಮಿ.ಮೀ, ಮಲ್ಲಿಪಟ್ಟಣ 35.3 ಮಿ.ಮೀ,ಕೊಣನೂರು 24 ಮಿ.ಮೀ, ಬಸವಾಪಟ್ಟಣ ಮತ್ತು ರಾಮನಾಥಪುರ ತಲಾ 18.2 ಮಿ.ಮೀ, ದೊಡ್ಡಮಗ್ಗೆ 11. 8 ಮಿ.ಮೀ, ದೊಡ್ಡ ಬೆಮ್ಮತ್ತಿ 6.2 ಮಿ.ಮೀ .
0 Comments