ಅರಕಲಗೂಡು: ತಾಲೂಕಿನ ಕೊಣನೂರು ಹಾಗೂ ರಾಮನಾಥಪುರ ಹೋಬಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ವಾಸದ ಮನೆಗಳಿಗೆ ನೀರು ನುಗ್ಗಿದ್ದು ಬೆಳೆಗಳು ಜಲಾವೃತಗೊಂಡಿವೆ.
ಮಳೆ ಅಬ್ಬರಕ್ಕೆ ಕೊಣನೂರು, ಬನ್ನೂರಿನಲ್ಲಿ 6 ಮನೆಗಳಿಗೆ ಹಾನಿಯಾಗಿದೆ. ಬಸವಾಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ 14 ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮವಾಗಿ ಮನೆಯೊಳಗಿದ್ದ ಆಹಾರ ಪದಾರ್ಥಗಳು, ದಿನಸಿಗಳು ವಸ್ತುಗಳು ಹಾನಿಗೀಡಾಗಿವೆ. ಬಸವಾಪಟ್ಟಣದ ಚಂದ್ರಶೆಟ್ಟಿ ಎಂಬುವರ ಮನೆಯ ಗೋಡೆ ಮಳೆ ಹೊಡೆತಕ್ಕೆ ಸಿಲುಕಿ ಪಕ್ಕದ ಕಾವೇರಿ ಎಂಬುವರ ಮನೆ ಮೇಲೆ ಬಿದ್ದು ಎರಡು ಮನೆಗಳು ಜಖಂಗೊAಡಿವೆ. ಬಿಳಗೂಲಿ ಗ್ರಾಮದಲ್ಲಿ ಪುಟ್ಟರಾಜು ಎಂಬುವರ ಬ್ಯಾರಲ್ ಮನೆ ಗೋಡೆ ಕುಸಿದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಸಿಂದಿ ಕರು ಅಸುನೀಗಿದೆ.
ಭಾರಿ ಮಳೆಗೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಅಚ್ಚುಕಟ್ಟು ಬೆಳೆ ಜಮೀನುಗಳಿಗೆ ನೀರು ನುಗ್ಗಿದೆ. ಅಡಿಕೆ, ಬಾಳೆ, ತೋಟದ ಬೆಳೆಗಳು ಜಲಾವೃತಗೊಂಡಿವೆ. ವೀಳ್ಯದೆಲೆ ಹಂಬು ನಾಶವಾಗಿದೆ. ಕೆಲವು ಕಡೆ ಮಳೆ ನೀರಿನ ರಭಸಕ್ಕೆ ನಾಲೆಗಳು ಉಕ್ಕಿ ಹರಿದಿದ್ದು ಪಕ್ಕದ ಗದ್ದೆಗಳ ಮೇಲೆ ನೀರು ಉರುಳಿದೆ. ಸತತ ಮಳೆಯ ತೇವಾಂಶಕ್ಕೆ ಸಿಲುಕಿ ಶುಂಠಿ ಬೆಳೆ ಕರಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತೀವ್ರ ಹದಗೆಟ್ಟಿರುವ ಕೊಣನೂರು- ಮೈಸೂರು ಮಾರ್ಗದ ರಸ್ತೆ ಮೇಲೆ ಮಳೆ ನೀರು ಹೊಳೆಯಾಗಿ ಹರಿದು ಪೂರ್ತಿ ಹದಗೆಟ್ಟು ಹೋಗಿದೆ. ನಿರ್ಮಾಣ ಹಂತದಲ್ಲಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ಸೇತುವೆ ಹಳ್ಳದಲ್ಲಿ ಮಳೆ ನೀರು ನಿಂತು ರಸ್ತೆ ಕೆಸರುಮಯವಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಗುಂಡಿಗಿಳಿದ ಕೆಸರಿನ ಅಭಿಷೇಕ ಮಾಡಿಕೊಂಡು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಭೇಟಿ: ಮಳೆಯಿಂದ ಹಾನಿಗೀಡಾದ ಸ್ಥಳಕ್ಕೆ ಸೋಮವಾರ ಕೊಣನೂರು ರಾಜಸ್ವ ನಿರೀಕ್ಷಕ ಮಂಜುನಾಥ್, ರಾಮನಾಥಪುರ ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಗಳಾದ ಮದನ್, ಯಾದವ್, ಉಮೇಶ್ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಗಳಿಗೆ ನೀರು ನುಗ್ಗಿ ಸಂಕಷ್ಟಕ್ಕೆ ತುತ್ತಾದ ನಿವಾಸಿಗಳಿಗೆ ಶೀಘ್ರವೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದ ಎಂದು ರಾಜಸ್ವ ನಿರೀಕ್ಷಕ ಸಿ. ಸ್ವಾಮಿ ತಿಳಿಸಿದರು.
ಸಂಪಾದಕ ರವಿ
0 Comments