ಹೆಣ್ಣಿಲ್ಲದ ಸಮಾಜನ ಊಹಿಸಿಕೊಳ್ಳುವುದು ಕಷ್ಟ, ಹೆಣ್ಣು ಮಗು ಹುಟ್ಟಿದರೆ ಖುಷಿಪಡಿ: ಡಾ.‌ಸಾವಿತ್ರಿ

ಅರಕಲಗೂಡು: ಎಲ್ಲ ಕ್ಷೇತ್ರದ ಉನ್ನತಿಗೆ ಮಹಿಳೆಯರೇ ಕಾರಣರಾಗುತ್ತಿದ್ದರೂ ಇಂದಿಗೂ ಹೆಣ್ಣು ಮಗು ಹುಟ್ಟಿದಾಕ್ಷಣ ಸಮಾಜ ನೋಡುವ ಮನಸ್ಥಿತಿ ಮಾತ್ರ ಬದಲಾಗದಿರುವುದು ಕಳವಳಕಾರಿ ಸಂಗತಿ ಎಂದು ಹಾಸನದ ಮಲ್ನಾಡ್ ನರ್ಸಿಂಗ್ ಹೋಂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಎ. ಸಾವಿತ್ರಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ರಾಮನಾಥಪುರದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಮಹಿಳಾ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೌಟುಂಬಿಕವಾಗಿ ಮಾತ್ರವಲ್ಲದೆ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.

 ಸ್ತ್ರೀ ಇಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಕಷ್ಟ, ಇಂತಹ ಪರಿಸ್ಥಿತಿ ಎಲ್ಲರ ಅರಿವಿಗೆ ಬಂದಿದ್ದರೂ ಹೆಣ್ಣು ಮಗು ಜನಿಸಿದ ಕೂಡಲೆ ಸಂಭ್ರಮ ಪಡುವವರು ವಿರಳ. ಹೆಣ್ಣು, ಗಂಡು ಮಗು ಜನನ ಪ್ರಕೃತಿ ನಿಯಮ, ಆಕೆ ಹೆರಿಗೆ ವೇಳೆ ಅನುಭವಿಸುವ ಯಾತನೆ ಲೆಕ್ಕಿಸದೆ ಹೆಣ್ಣು ಮಗುವೆಂದು ತಿರಸ್ಕರಿಸುವ ಮನಸ್ಥಿತಿ ಬದಲಾಗಬೇಕು. 

ಕಾನೂನು ಮೀರಿ 18 ವರ್ಷದೊಳಗೆ ಹೆಣ್ಣು ಮಕ್ಕಳ ಮದುವೆ ಬೇಡ ಎಂದು ಪ್ರತಿಪಾದಿಸಿದರು.
ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ನಿಯಮಿತವಾಗಿ ಲಸಿಕೆ ಪಡೆದು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಬಲಿಷ್ಠ, ಗಂಡಿಗೆ ಇಂದು ಹೆಣ್ಣು ಸಿಗದಿರುವುದಕ್ಕೆ ಕಳೆದ 25 ವರ್ಷಗಳಿಂದ ಎಸಗಿದ ಹೆಣ್ಣು ಬ್ರೂಣ ಹತ್ಯೆಯೇ ಕಾರಣ, ಈ ಪಿಡುಗಿನ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದರು.

ಸಬ್ ಇನ್ಸ್ಪೆಕ್ಟರ್ ಕಾವ್ಯ ಎಲ್ಲರೂ ರಸ್ತೆ ಸುರಕ್ಷತೆ ಪಾಲಿಸುವಂತೆ ಒತ್ತಿ ಹೇಳಿದರು.

 ತಾಲೂಕು ಕೃಷಿ ಸಹಾಯಕ ಅಧಿಕಾರಿ ಕೆ.ಜೆ. ಕವಿತಾ ಇದ್ದರು. ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಮಹಿಳಾ ಶಕ್ತಿ ಕುರಿತು ವಿವರಿಸಿದರು.

 ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು.

Post a Comment

0 Comments