ಜನಪ್ರಿಯ ಸಂಸದ ಶ್ರೇಯಸ್ ಪಟೇಲ್ ವಿರುದ್ದದ ಹೇಳಿಕೆಗೆ ಖಂಡನೆ

ಅರಕಲಗೂಡು: ಪಟ್ಟಣ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಭಾನ ಷರೀಫ್ ಸಂಸದ ಶ್ರೇಯಸ್ ಪಟೇಲ್  ಮತ ಹಾಕಿಲ್ಲವೆಂದು ಹೇಳಲು ಯಾವ ನೈತಿಕತೆ ಉಳಿಸಿಕೊಂಡಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಸದಸ್ಯರ ವಿರುದ್ದವಾಗಿ ನಡೆದುಕೊಂಡಿದ್ದ ಸುಭಾನ‌ ಷರೀಫ್ ಪಕ್ಷದ ಹಿರಿಯ ನಾಯಕರ ಸಭೆಗೂ ಹಾಜರಾಗದೆ ಜೆಡಿಎಸ್, ಬಿಜೆಪಿ ಸದಸ್ಯರ ಜತೆ ಗುರುತಿಸಿಕೊಂಡು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇವರಿಗೆ ಸೂಚಕರಾಗಿ ಯಾರು ಸಹಿ ಹಾಕಿದ್ದರು ಎಂಬುದನ್ನು ಹೇಳಲಿ, ಯಾರೊಂದಿಗೆ ಆಗಮಿಸಿದ್ದರು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ ಅವರಿಗೆ ಕೈ ಎತ್ತದೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ‌ ಸೂಚಿಸಿದ್ದರಿಂದ ಸಂಸದರು ಸುಭಾನ ಷರೀಫ್ ಅವರಿಗೆ ಮತ ಹಾಕಲಿಲ್ಲ. ಬಿಜೆಪಿ ಜತೆ ಗುರುತಿಸಿಕೊಂಡು ಸಂಸದರ ತೇಜೋವದೆ ಮಾಡಿರುವ ಸುಭಾನ ಷರೀಫ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾಂಗ್ರೆಸ್ ವೈದ್ಯಕೀಯ ಜಿಲ್ಲಾ ಘಟಕದ ಅಧ್ಯಕ್ಷ ಡಾ. ದಿನೇಶ್ ಭೈರೇಗೌಡ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲಿ ಯಾರೂ ಮುಖಂಡರು ಇಲ್ಲದ ಸಂದರ್ಭದಲ್ಲಿ ಪಪಂ ಚುನಾವಣೆಯಲ್ಲಿ ಸುಭಾನ ಷರೀಫ್ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಗೆಲ್ಲಿಸಲಾಗಿತ್ತು. ಇವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದರು.

ಪಪಂ ಸದಸ್ಯ ಅನಿಕೇತನ್ ಮಾತನಾಡಿ, ಪಕ್ಷದಲ್ಲಿ ಸಾಮಾಜಿಕ ನ್ಯಾಯದಡಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಮೊದಲ ಅವಧಿಗೆ ಮುಸ್ಲಿಂ ಸಮುದಾಯ ಕ್ಕೆ ನಂತರ ಪರಿಶಿಷ್ಟ ವರ್ಗಕ್ಕೆ ನೀಡಲಾಗಿತ್ತು. ಈಗ ಕುರುಬ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಲಾಗಿದೆ. ಸುಭಾನ ಷರೀಫ್ ಸಂಸದರ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಪಪಂ ಮಾಜಿ ಅಧ್ಯಕ್ಷ ಅಬ್ದುಲ್ ಬಾಸಿದ್ ಮಾತನಾಡಿ,   ಕಾಂಗ್ರೆಸ್ ಸದಸ್ಯರೊಂದಿಗೆ ಸೇರದೆ ಬಿಜೆಪಿ ಜತೆ ಒಡನಾಟ ಬೆಳೆಸಿದ್ದ ಸುಭಾನ ಷರೀಫ್ ಸಂಸದರ ವಿರುದ್ಧನೀಡಿರುವ ಹೇಳಿಕೆ ಶುದ್ದ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ‌. ದಿವಾಕರ್ ಗೌಡ, ಗಣೇಶ್ ವೇಲಾಪುರಿ ಗೋಷ್ಠಿಯಲ್ಲಿದ್ದರು. ಮುಂದಿನ ದಿನಗಳಲ್ಲಿ ನನ್ನ ವಿರುದ್ದ ಮಾತನಾಡಿದವರ ಬಗ್ಗೆ ದಾಖಲೆ ಸಮೇತ ಬಿಚ್ಚಿಡುವುದಾಗಿ ಪ್ರಸನ್ನ ಕುಮಾರ್ ಹೇಳಿದರು.

Post a Comment

0 Comments