ಅಕ್ರಮ ಮರಳು ಗಣಿಗಾರಿಕೆ ಭ್ರಷ್ಟಾಚಾರ, ಸಬ್ ರಿಜಿಸ್ಟರ್ ಕಚೇರಿ ಅಕ್ರಮ ದೂರಿನ ವಿರುದ್ದ‌ ಶಾಸಕ ಎಟಿಆರ್ ಕೆಂಡಾಮಂಡಲ

ಅರಕಲಗೂಡು:  ಅಕ್ರಮ ಮರಳು ಗಾರಿಕೆ ದೂರಿನ ಹಿನ್ನೆಲೆಯಲ್ಲಿ   ವಶಪಡಿಸಿಕೊಂಡಿದ್ದ  ನೂರಾರು ಟನ್ ಮರಳನ್ನು ಸರ್ಕಾರಕ್ಕೆ ವಂಚಿಸಿ ಅಧಿಕಾರಿಗಳೆ ಅಕ್ರಮವಾಗಿ ಸಾಗಣೆ ಮಾಡಿರುವುದಲ್ಲದೆ   ಮರಳಿನ ಕಿಮ್ಮತ್ತು ಕಟ್ಟುವಂತೆ ರೈತರಿಗೆ ಕಂದಾಯ ಇಲಾಖೆ  ನೋಟೀಸ್ ನೀಡಿರುವ ಕ್ರಮದ ಬಗ್ಗೆ  ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. 

ತಾಲ್ಲೂಕು ಕಚೇರಿಗೆ ಗುರುವಾರ  ಭೇಟಿ ನೀಡಿ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿ,  2014 ರಲ್ಲಿ ತಾಲ್ಲೂಕಿನ ಕಟ್ಟೆ ಪುರ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಾರಿಕೆ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು  ದಾಳಿ ನಡೆಸಿ  467 ಟನ್ ಮರಳನ್ನು ವಶಕ್ಕೆ ಪಡೆದಿದ್ದರು.  2015 ರಲ್ಲಿ  ಮಾದಾಪುರ ಗ್ರಾಮದ ಕೃಷ್ಣೇಗೌಡ  ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿ, ಅಧಿಕಾರಿಗಳು ವಶ ಪಡಿಸಿಕೊಂಡ ಮರಳನ್ನು ನಿಯಮಾನುಸಾರ ಹರಾಜು ಮಾಡಿಲ್ಲ. ಬಡವರಿಗಾಗಲಿ, ಸರ್ಕಾರದ ಕಾಮಗಾರಿಗಳಿಗೆ ಮರಳನ್ನು ನೀಡದೆ  ಅಧಿಕಾರಿಗಳು ಅಕ್ರಮವಾಗಿ ಮರಳನ್ನು ತಮಗೆ ಇಷ್ಟ ಬಂದವರಿಗೆ ಹಂಚಿಕೆ ಮಾಡಿದ್ದಾರೆ,  ಯಾವುದೇ ಕಾನೂನು ನಿಯಮಗಳ ಪಾಲನೆಯಾಗಿಲ್ಲ. ಈ ಕುರಿತು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಲೋಕೋಪಯೋಗಿ ಇಲಾಖೆ ಎಇಇ, ಸಹಾಯಕ  ಎಂಜಿನಿಯರ್  ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಬಗ್ಗೆ ಪ್ರಕರಣದ ತನಿಖೆಗೆ ಲೋಕಾಯುಕ್ತ ಮುಂದಾಗಿತ್ತು. 8 ವರ್ಷದ ಬಳಿಕ   ಎಚ್ಚೆತ್ತ  ಅಧಿಕಾರಿಗಳು ಪ್ರಕರಣದಿಂದ ಪಾರಾಗಲು ಮರಳನ್ನು ರೈತರು ಮಾರಿಕೊಂಡಿದ್ದಾರೆ ಎಂದು ಆರೋಪಿಸಿ ಮರಳಿನ ಕಿಮ್ಮತ್ತು ಕಟ್ಟುವಂತೆ ನೋಟೀಸ್ ನೀಡಿದೆ  ಎಂದು ಆರೋಪಿಸಿದರು. 

ವಶಪಡಿಸಿಕೊಂಡ ಮರಳಿಗೆ ಅಧಿಕಾರಿಗಳೆ ಜವಾಬ್ದಾರರಾಗಿದ್ದು ಅದರ ರಕ್ಷಣೆಯ ಹೊಣೆಯೂ ಅವರದೇ ಅಗಿತ್ತು. ತಮ್ಮ ಭ್ರಷ್ಠಾಚಾರವನ್ನು ಮುಚ್ಚಿಕೊಳ್ಳಲು  ರೈತರಿಗೆ ನೋಟೀಸ್ ನೀಡಿರುವ ಕ್ರಮ ಖಂಡನೀಯ ಕೂಡಲೆ ಪ್ರರಣದ ಕುರಿತು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ  ಜರುಗಿಸಬೇಕು. ಇಲ್ಲದಿದ್ದರೆ ಈ ಕುರಿತು ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. 

ಅಕ್ರಮ ಆರೋಪ:   ಸಬ್ ರಿಜಿಸ್ಟ್ರಾರ್ ಕಚೇರಿಗೆ  ಗುರುವಾರ ದಿಡೀರ್  ಭೇಟಿ ನೀಡಿದ  ಶಾಸಕ ರಾಮಸ್ವಾಮಿ ನೌಕರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಇಲ್ಲಿನ ಸಬ್ ರಿಜಿಸ್ಟ್ರಾರ್  ಕಳೆದ ತಿಂಗಳು ವರ್ಗಾವಣೆಯಾಗಿದ್ದಾರೆ. ಬದಲಿ ವ್ಯವಸ್ಥೆ ಮಾಡಿ ದ್ವಿತೀಯ ದರ್ಜೆ ಸಹಾಯಕರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ.  ಇದು ಸರಿಯಾದ ಕ್ರಮವಲ್ಲ. ನಿಯಮಾವಳಿ ಪ್ರಕಾರ ಕನಿಷ್ಠ ಪ್ರಥಮ ದರ್ಜೆ ಸಹಾಯಕರಿಗೆ ಅಧಿಕಾರ ನೀಡಬೇಕಿತ್ತು, ಕಳೆದ 15 ದಿನಗಳಿಂದ ಕಚೇರಿಯಲ್ಲಿ  ಅತೀ ಹೆಚ್ಚಿನ  ಶೋಷಣೆ, ಕಿರುಕುಳ, ಭ್ರಷ್ಟಚಾರದ ಅಕ್ರಮಗಳು  ನಡೆಯುತ್ತಿರುವ ಕುರಿತು  ಹಲವಾರು ಜನರಿಂದ ದೂರುಗಳು ಬಂದ ಹಿನ್ಲೆಯಲ್ಲಿ ಕಚೇರಿಗೆ ಭೇಟಿ ನೀಡಿ ತೀವ್ರ ತರವಾದ ಕಟು ಶಬ್ದಗಳಲ್ಲಿ  ಅಧಿಕಾರಿಗಳಿಗೆ  ಎಚ್ಚರಿಕೆ ನೀಡಿದ್ದಾಗಿ ಹೇಳಿದರು.  ಜಿಲ್ಲಾ ನೋಂದಣಿ ಅಧಿಕಾರಿಗಳೊಂದಿಗೂ ಈ ಕುರಿತು ದೂರವಾಣಿಯಲ್ಲಿ ಮಾತನಾಡಿದ್ದೇನೆ, ಬಡವರು, ರೈತರ ರಕ್ತ ಹೀರುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದೆ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಹಿರಿಯ  ಅಧಿಕಾರಿಗಳನ್ನು ಹೊಣೆಗಾರರನ್ನಾಗಿ  ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Post a Comment

0 Comments