ಆದಿ ಚುಂಚನಗಿರಿ ಶ್ರೀಗಳ ಮುತ್ತಿನ ಪಲ್ಲಕ್ಕಿ ಮೆರವಣಿಗೆ ವೈಭವ: ಗೋ ಪೂಜೆ ಸಲ್ಲಿಸಿದ ಶ್ರೀಗಳು

ಅರಕಲಗೂಡು: ತಾಲೂಕಿನ ಸುಕ್ಷೇತ್ರ ಚಿಕ್ಕಬೊಮ್ಮನಹಳ್ಳಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಗುರುವಾರ ಆಗಮಿಸಿದ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಭಕ್ತರು ಸಂಭ್ರಮದ ಸ್ವಾಗತ ಕೋರಿದರು.

ಗ್ರಾಮ ಪ್ರವೇಶಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆ ನಡೆಸಿ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು. ಮಹಿಳೆಯರು ಪೂರ್ಣ ಕುಂಭ ಕಳಸ ಹೊತ್ತು ಸಾಗಿದರು. ಮೆರವಣಿಗೆಯುದ್ದಕ್ಕೂ ಭಕ್ತರು ಜೈಕಾರ ಮೊಳಗಿಸಿದರು.

ಶ್ರೀ ರಂಗನಾಥಸ್ವಾಮಿ ಸುಕ್ಷೇತ್ರ ಪ್ರವೇಶಿಸಿದ ಶ್ರೀಗಳು ಗೋ ಪೂಜೆ ನೆರವೇರಿಸಿದರು. ದೇವಸ್ಥಾನ ದೇವರ ದರ್ಶನ ಪಡೆದರು.

ಜಾತ್ರೆ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನ ಬೀದಿಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಹಾಗೂ ಸುತ್ತಲಿನ ಅಪಾರ ಭಕ್ತರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಅರಕಲಗೂಡಿಗೆ ಆಗಮಿಸಿದ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಭಕ್ತರಿಂದ ಸಂಭ್ರಮದ ಸ್ವಾಗತ ಸಿಕ್ಕಿತು. ಶ್ರೀಗಳು ಅನಕೃ ವೃತ್ತಕ್ಕೆ ಮಾಲಾರ್ಪಣೆ ಮಾಡಿದರು.

Post a Comment

0 Comments