ಅರಕಲಗೂಡು: ಅರಿವಿಲ್ಲದೆ ಪರಿಸರ ನಾಶಗೊಳಿಸುವುದು ದೊಡ್ಡಸ್ತಿಕೆಯಲ್ಲ, ಸಾವಿರಾರು ಜನರ ಜೀವನಾಡಿಯಾದ ಜೀವನದಿ ಕಾವೇರಿ ಬತ್ತಿ ಹೋಗುವುದನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡದಿದ್ದರೆ ಮನುಕುಲಕ್ಕೆ ಎದುರಾಗುವ ಗಂಡಾAತರವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ತಿಳಿಸಿದರು.
ತಾಲೂಕಿನ ಮಲ್ಲಿಪಟ್ಟಣದ ಸಮುದಾಯ ಭವನದಲ್ಲಿ ಈಶ ಪೌಂಡೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾವೇರಿ ಕೂಗು ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಕಾಡುಗಳು ನಾಶವಾಗಿ ಈಗಾಗಲೇ ಸಕಾಲದಲ್ಲಿ ಮಳೆಯಾಗದೆ ಪ್ರವಾಹ ಉಂಟಾಗಿ ಅನಾಹುತಗಳು ಘಟಿಸುತ್ತಿವೆ. ವರ್ಷದ ಕೆಲ ತಿಂಗಳಷ್ಟೇ ಹರಿಯುವ ಕಾವೇರಿ ನದಿ ಹೆಚ್ಚು ಕಾಲ ಸಮುದ್ರ ಸೇರದೆ ಜಲಮೂಲಗಳು ಬತ್ತುತ್ತಿವೆ. ಕಾವೇರಿ ನಾಡಿನ ಜನರ ಬದುಕು ಹಸನಾಗಬೇಕಾದರೆ ಎಲ್ಲರೂ ಗಿಡ ಮರಗಳನ್ನು ಬೆಳೆಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು.
ಜಮೀನಿನಲ್ಲಿ ವ್ಯವಸಾಯದೊಂದಿಗೆ ಮರ ಕೃಷಿ ಆಧಾರಿತ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನಗಳನ್ನು ರೈತರಿಗೆ ತಲುಪಿಸಲು ಈಶಾ ಪೌಂಡೇಷನ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ರೈತರ ಆರ್ಥಿಕ ಜೀವನ ಸುಧಾರಿಸುತ್ತಿದೆ. ಅಂತರ್ಜಲ ವೃದ್ಧಿಗೆ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಶಾ ಪೌಂಡೇಷನ್ ತಾಲೂಕು ಸಂಯೋಜಕ ಎಸ್. ಅವಿನಾಷ್ ಮಾತನಾಡಿದರು. ಗ್ರಾಪಂ ಸದಸ್ಯರಾದ ಸುಮಿತ್ರ, ಪೂಜಾ, ಯೋಗೇಶ್, ನಾಗರಾಜ್, ಚಂದ್ರೇಗೌಡ, ಪಿಡಿಒ ರಂಗಸ್ವಾಮಿ, ಸ್ವಯಂ ಸೇವಕರಾದ ಹರ್ಷ, ವೈಭವ್, ರೈತ ಮರ ಮಿತ್ರ ಕಾರ್ತಿಕ್, ಹರೀಶ್, ಧರ್ಮಯ್ಯ, ತಾಪಂ ಮಾಜಿ ಅಧ್ಯಕ್ಷ ಎ.ಸಿ. ದೇವರಾಜೇಗೌಡ ಮುಂತಾದವರು ಉಪಸ್ಥಿತರಿದ್ದರು.
0 Comments